ಬೆಟ್ಟದಪುರದ ಭಾರತ್ ಗ್ಯಾಸ್ ಏಜೆನ್ಸಿ ಎದುರು ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಪಡೆಯಲು ಸಾಲುಗಟ್ಟಿ ನಿಂತಿರುವ ಗ್ರಾಹಕರು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ
ಹಲವು ದಿನಗಳಿಂದ ಸರಿಯಾಗಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಸರಬರಾಜು ನೀಡದ ಹಿನ್ನೆಲೆಯಲ್ಲಿ
ಸೋಮವಾರ ಸ್ಥಳಕ್ಕೆ ಮಾಜಿ ಶಾಸಕ ಕೆ.ಮಹದೇವ್ ಭೇಟಿ ನೀಡಿ, ಸಮಸ್ಯೆ ಆಲಿಸಿದರು.
ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಕಳೆದ ಹಲವು ದಿನಗಳಿಂದ ಬುಕಿಂಗ್ ಆದರೂ ಸಿಲಿಂಡರ್
ಸಿಗುತ್ತಿಲ್ಲ, ಇಂದು ನಾಳೆ ಎಂದು ಸಾಬೂಬು ಹೇಳುತ್ತಾರೆ.
ಸೂಕ್ತವಾಗಿ ಸರಬರಾಜು ಮಾಡುವಲ್ಲಿ ವಿಫಲವಾಗಿದ್ದಾರೆ. ರಾತ್ರಿ ಇಡೀ ಇಲ್ಲಿಯೇ ಕಾದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ವಿತರಣೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೆ ಬಗೆಹರಿಸುವುದಾಗಿ ಭರವಸೆ ನೀಡುತ್ತಾರೆ, ಆದರೆ ಅಧಿಕಾರಿಗಳು ಕ್ರಮ ವಹಿಸುವುದಿಲ್ಲವೆಂದು ಗ್ರಾಹಕರು ದೂರಿದರು.
ಸಮಸ್ಯೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಕೆ.ಮಹದೇವ್, ಬೆಟ್ಟದಪುರದ ಏಜೆನ್ಸಿಯಲ್ಲಿ
ಅಡುಗೆ ಅನಿಲ ಸಿಲಿಂಡರ್ ವಿತರಣೆಗೆ ತೊಡಕಾಗಿದೆ. ಹಾಗಿದ್ದರೂ ಜನಪ್ರತಿನಿಧಿಗಳು ಎಂದು ಕರೆಸಿಕೊಳ್ಳುವ ಶಾಸಕರು ಇತ್ತ ಗಮನ ಹರಿಸಿಲ್ಲ ಎಂದರು.
ಆಹಾರ ಇಲಾಖೆ ಅಧಿಕಾರಿ, ತಹಸೀಲ್ದಾರ್, ಜಿಲ್ಲಾಧಿಕಾರಿಗಳ ಜತೆ ಈ ಬಗ್ಗೆ ಮಾತನಾಡಿದ್ದೇನೆ. ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ ಕೊಟ್ಟಿದ್ದೇನೆ. ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಭರವಸೆ ನೀಡಿದರು. ಸಮಸ್ಯೆ ಬಿಗಡಾಯಿಸಿದರೆ ಹೋರಾಟಕ್ಕೂ ಸಿದ್ಧ ಎಂದು ಅವರು ಎಚ್ಚರಿಸಿದರು.