ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗರಳಪುರಿ ಉತ್ಸವ ಅಂಗವಾಗಿ ಆಯೋಜಿಸಿದ್ದ ವಚನ ಕಂಠಪಾಠ ಸ್ಪರ್ಧೆಯನ್ನು ಶ್ರೀ ನಾಗರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ, ಬಸವ ಯೋಗೇಶ್, ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್ ಇದ್ದರು. 
ಮೈಸೂರು

ಗರಳಪುರಿ ಉತ್ಸವ ಉತ್ತಮ ಕಾರ್ಯಕ್ರಮ

ನಂಜನಗೂಡು: ದೊಡ್ಡಜಾತ್ರೆ ಅಂಗವಾಗಿ ನಂಜನಗೂಡಿನಲ್ಲಿ ನಡೆಯುತ್ತಿರುವ ಗರಳಪುರಿ ಉತ್ಸವ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ನಗರದ ದೇವಿರಮ್ಮನಹಳ್ಳಿ ಶರಣ ಸಂಗಮ ಮಠದ ಶ್ರೀ ನಾಗರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಗರಳಪುರಿ ಉತ್ಸವ ಅಂಗವಾಗಿ ಶರಣನ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ವಚನ ಕಂಠಪಾಠ ಸ್ಪರ್ಧೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇಂತಹ ಕಾರ್ಯಕ್ರಮಗಳು ನಂಜನಗೂಡಿನಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಸ್ಥಳೀಯ ಶಾಸಕ ದರ್ಶನ್ ದೂರ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಪ್ರಶಂಶನೀಯ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಗರಳಪುರಿ ಉತ್ಸವ ವಿಶೇಷ ಕಾರ್ಯಕ್ರಮ. 21ರಿಂದ 29ರವರೆಗೆ ಪ್ರತಿದಿನವೂ ನಗರದ ಎಲ್ಲ ಭಾಗಗಳಲ್ಲೂ ಸಾಂಸ್ಕೃತಿಕ, ಕ್ರೀಡೆ, ಯೋಗ ಸೇರಿದಂತೆ ಇತರ ಕಾರ್ಯಕ್ರಮ ಆಯೋಜಿಸಲಾಗಿದೆ. 29ರಂದು ಸಮಾರೋಪ ಸಮಾರಂಭದ ಜತೆಗೆ ರಸಮಂಜರಿ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದೆ ಎಂದರು.
ಏ.30 ರಂದು ಜರುಗುವ ಗೌತಮ ಪಂಚ ಮಹಾರಥೋತ್ಸವಕ್ಕೆ ಎಲ್ಲರೂ ಆಗಮಿಸಿ ಶ್ರೀ ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆಯಿರಿ ಎಂದರು.
ಕಾರ್ಯಕ್ರಮ ಆಯೋಜಕ ಹಾಗೂ ಬಸವ ಸೇನೆಯ ಬಸವ ಯೋಗೇಶ್ ಮಾತನಾಡಿ, ಯಾವುದೇ ಕಾರ್ಯಕ್ರಮಗಳಲ್ಲೂ ವಚನ ಕಂಠಪಾಠ ಸ್ಪರ್ಧೆ ಆಯೋಜನೆ ಮಾಡಿರಲಿಲ್ಲ. ಆದರೆ ಈ ಬಾರಿ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ತಂದಿದೆ. ಸುಮಾರು 250ಕ್ಕೂ ಹೆಚ್ಚು ಸ್ಪರ್ಧಿಗಳು ಬಹಳ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ಹಾಗೂ ಬಹುಮಾನಗಳನ್ನು ಬಸವ ಯೋಗಿ ವಿತರಿಸಿದರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಚಂದನ ಗೌಡ, ಮುಖಂಡರಾದ ಸಿ.ಎಂ.ಶಂಕರ್, ಶ್ರೀಧರ್, ಕುರಹಟ್ಟಿ ಮಹೇಶ್, ಶ್ರೀಕಂಠ ನಾಯಕ, ಶಿವಪ್ಪ, ಬಸವರಾಜು ಚೆನ್ನಪ್ಪ, ಸೋಮಶೇಖರ್, ಶಶಿಕಲಾ ಗಿರೀಶ್, ಗಾಯತ್ರಿ ಮೋಹನ್, ಮಾದನಹಳ್ಳಿ ಗಿರೀಶ್, ಗೀತಾ, ಹಾಡ್ಯ ರಾಜು, ಸೌಭಾಗ್ಯಾ, ಅನಸೂಯಾ, ಕೋಮಲಾ, ಮುದ್ದಹಳ್ಳಿ ಅಶೋಕ್, ರಾಜೇಂದ್ರ, ನಟರಾಜು, ಬಸವರಾಜ್ ಇದ್ದರು.