ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಪ್ರೊ.ಎನ್.ಕೆ. ಲೋಕನಾಥ್, ಎಂ.ಕೆ. ಸವಿತಾ, ಪ್ರೊ.ಎನ್. ನಾಗರಾಜ, ಡಾ.ಅಮರ್ ಕುಮಾರ್ ಹಾಗೂ ಇತರರು ಇದ್ದರು.
ಮೈಸೂರು: ‘ಗಾಂಧೀಜಿ ಜಗತ್ತಿಗೆ ಅನಿವಾರ್ಯ, ಮರೆತರೆ ವಿಶ್ವದ ನಾಶ’ ಎಂಬ ಮಾರ್ಟಿನ್ ಲೂಥರ್ ಕಿಂಗ್ ಅವರ ಹೇಳಿಕೆಯು ಗಾಂಧೀಜಿ ಅವರ ವಿಚಾರಧಾರೆ ಮನುಕುಲ ಇರುವರೆಗೂ ಪ್ರಸ್ತುತ ಎಂಬುದನ್ನು ಸೂಚಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ, ಗಾಂಧಿ ಭವನ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿದ್ಯಾವರ್ಧಕ ಪ್ರಥಮದರ್ಜೆ ಕಾಲೇಜು ವತಿಯಿಂದ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಜಗತ್ತಿನಾದ್ಯಂತ ರಾಜಕೀಯ, ಆರ್ಥಿಕ, ಸಾಮಾಜಿಕ ಸಂಘರ್ಷಗಳು, ಯುದ್ಧ, ಭಯೋತ್ಪಾದನೆ, ಆಡಳಿತ ಕ್ಷೇತ್ರಗಳಲ್ಲಿ ತಲೆದೂರಿರುವ ಅಶಾಂತಿ ಮತ್ತು ಹಿಂಸೆಗೆ ಮಾರ್ಗೋಪಾಯವೆಂದರೆ ಗಾಂಧೀಜಿ ಪ್ರತಿಪಾದಿಸಿದ ಮಾನವೀಯ ಮೌಲ್ಯಗಳಾಗಿವೆ. ಗಾಂಧೀಜಿ ಹುತಾತ್ಮರಾಗಿ ಇಂದಿಗೆ 78 ವರ್ಷಗಳೇ ಗತಿಸಿದ್ದರೂ ಅವರ ವ್ಯಕ್ತಿತ್ವದ ಬೆಳಕು ಮಾತ್ರ ವಿಶ್ವವನ್ನು ಸ್ಫೂರ್ತಿಗೊಳಿಸುತ್ತಲೆ ಇದೆ ಎಂದು ಹೇಳಿದರು.
ಸರ್ವಧರ್ಮಗಳ ಪ್ರೇಮಿಯಾಗಿದ್ದ ಅವರು ಎಲ್ಲ ಧರ್ಮೀಯರು ಸಹೋದರತ್ವ, ಸಹಬಾಳ್ವೆಯಿಂದ ಪರಸ್ಪರ ಅನ್ಯೋನ್ಯವಾಗಿ ರಬೇಕೆಂದು ಬಯಸಿದ್ದರು. ಮನುಷ್ಯ ಮನುಷ್ಯನಾಗಿ ಬದುಕಬೇಕು, ಆಗ ಮಾತ್ರ ಇಡೀ ಜಗತ್ತು ಶಾಂತಿಯಿಂದ ಬದುಕಲು ಸಾಧ್ಯ. ಇತರ ಧರ್ಮಗಳ ಬಗ್ಗೆ ಸಹಿಷ್ಣುತೆಯ ಮನೋಭಾವವನ್ನು ಬೆಳೆಸಿಕೊಂಡರೆ ಮಾತ್ರ ಮಾನವೀಯತೆಯನ್ನು ಅರಿತುಕೊಳ್ಳಲು ಸಾಧ್ಯ ಎಂದು ಗಾಂಧೀಜಿ ಸಾರಿ ಹೇಳಿದ್ದಾರೆ ಎಂದರು.
ಗಾಂಧೀಜಿ ಅವರು ಬುದ್ಧ, ಮಹಾವೀರ, ಬಸವ, ಏಸು, ಮಹಮದ್ ಪೈಗಂಬರ್, ಗುರುನಾನಕ್ ಸಂದೇಶಗಳ ಪ್ರತಿಪಾದಕರಾ ಗಿದ್ದರು. ವಕೀಲ, ಪತ್ರಿಕೋದ್ಯಮಿ, ಸಮಾಜ ವಿಜ್ಞಾನಿ, ಶಿಕ್ಷಣತಜ್ಞ, ಸಾಹಿತಿ, ತತ್ವಜ್ಞಾನಿ, ಹಾಸ್ಯಗಂಭೀರ, ಅರೆಬೆತ್ತಲೆ ಫಕೀರ ಎಂದೆಲ್ಲ ಹೆಸರಾದ ಗಾಂಧೀಜಿ ಪ್ರಮುಖವಾಗಿ ಮಾನವೀಯತೆಯ ಆರಾಧಕರಾಗಿದ್ದರು. ಗುರಿಯಂತೆ ಅದನ್ನು ಸಾಧಿಸುವ ದಾರಿಯೂ ಪರಿಶುದ್ಧವಾಗಿರಬೇಕು ಎಂಬ ಅತ್ಯಂತ ಉದಾತ್ತ ತತ್ವದ ಪ್ರತಿಪಾದಕರಾಗಿದ್ದ ಗಾಂಧೀಜಿ ಎಲ್ಲ ಕಾಲಕ್ಕೂ ಪ್ರಸ್ತುತರಾಗುತ್ತಾರೆ. ಗಾಂಧೀಜಿ ಅವರ ಚಿಂತನೆಗಳನ್ನು ಗಂಭೀರವಾಗಿ ಪರಿಗಣಿಸಿ ಜನರು ಅನುಸರಿಸುವಂತಾದರೆ ಜಗತ್ತಿನ ಎಲ್ಲ ತೆರನಾದ ಸಂಘರ್ಷಗಳಿಗೆ ಪರಿಹಾರ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಪೌರ ಕಾರ್ಮಿಕರಾದ ವಸಂತ ಅವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ಚಿಂತಕ ಡಾ.ಅಮರ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರ ಕುಮಾರ್, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಎಂ.ಬಿ. ಸುರೇಶ್, ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಅರವಿಂದ್ ಹಾಗೂ ಇತರರು ಇದ್ದರು.