ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಕನ್ನಡ ಮಠದಲ್ಲಿ ಜೂ.30ರಂದು ಚಿಕ್ಕವೀರ ದೇಶಿಕೇಂದ್ರ ಸ್ವಾಮೀಜಿ ಅವರ 97ನೇ ಗಣಾರಾಧನೆ ಹಾಗೂ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಅವರ 45ನೇ ಗಣಾರಾಧನಾ ಮಹೋತ್ಸವ ಆಯೋಜಿಸಲಾಗಿದೆ.
ಜತೆಗೆ ಕನ್ನಡ ಮಠದ 217ನೇ ಸ್ಥಾಪನಾ ವರ್ಷಾಚರಣೆ, ಶಿವಾನುಭವ ಕಾರ್ಯಕ್ರಮ, ನುಡಿ ನೈವೇದ್ಯ ಗೌರವಾರ್ಪಣೆ, ಯುವ ಚೇತನ ಶ್ರೀಗಳ ಸನ್ಮಾನ ಹಾಗೂ ಎಸ್.ಸಿ.ವಿ.ಡಿ.ಎಸ್. ವಿದ್ಯಾಸಂಸ್ಥೆಗಳ 35ನೇ ವಾರ್ಷಿಕೋತ್ಸವ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಚನ್ನಬಸವದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಸಾಂಬಸದಾಶಿವ ಸ್ವಾಮೀಜಿ ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಲಿದ್ದು, ಯುವ ಚೇತನ ಶ್ರೀಗಳಾಗಿ ಚಂದ್ರಶೇಖರ ಸ್ವಾಮೀಜಿ ಹಾಗೂ ಮಹದೇವಸ್ವಾಮೀಜಿ ಗೌರವ ಸ್ವೀಕರಿಸಲಿದ್ದಾರೆ. ಪ್ರತಿಭಾ ಪುರಸ್ಕಾರವನ್ನು ಪಿರಿಯಾಪಟ್ಟಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ವಿತರಿಸಲಿದ್ದು,ಅಖಿಲ ಭಾರತ ವೀರಶೈವ ಮಹಾಸಭೆ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ಯು. ಶಿವಪ್ಪ ಹಾಗೂ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಎಚ್.ಜಿ. ಪರಮೇಶ್ ಭಾಗವಹಿಸಲಿದ್ದಾರೆ ಎಂದು ಗಣಾರಾಧನಾ ಸಮಿತಿ ಹಾಗೂ ಕನ್ನಡ ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.