ಹುಣಸೂರು ತಾಲೂಕು ಕೃಷಿ ಪರಿಕರಗಳ ಮಾರಾಟಗಾರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಆಡಳಿತಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ರಾಜಶೇಖರ್, ಗಿರೀಶ್, ನಟೇಶ್ ಇತರದ್ದರು. 
ಮೈಸೂರು

ಬಂದ್‌ಗೆ ಹುಣಸೂರಿನಲ್ಲಿ ಸಂಪೂರ್ಣ ಬೆಂಬಲ

ಹುಣಸೂರು : ಯೂರಿಯಾ ಮತ್ತು ಇತರ ರಸಗೊಬ್ಬರಗಳ ಜತೆ ಇತರ ಟಾನಿಕ್‌ಗಳ ಮಾರಾಟ ಕಡ್ಡಾಯಗೊಳಿಸಿರುವ ನಿರ್ಧಾರ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಯ ಕೃಷಿ ಪರಿಕರಗಳ ಮಾರಾಟಗಾರರ ಸಂಘವು ಒಂದು ದಿನದ ವಹಿವಾಟು ಬಂದ್‌ಗೆ ನೀಡಿದ್ದ ಕರೆಗೆ ಹುಣಸೂರಿನಲ್ಲಿ ಸಂಪೂರ್ಣ ಬೆಂಬಲ ದೊರಕಿತು.
ಸೋಮವಾರ ಹುಣಸೂರು ತಾಲೂಕಿನಾದ್ಯಂತ ಎಲ್ಲ ಕೃಷಿ ಪರಿಕರ ಮಾರಾಟಗಾರರು, ರಸಗೊಬ್ಬರ ಮಾರಾಟಗಾರರ ಅಂಗಡಿ, ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಸೋಮವಾರವಾಗಿದ್ದರಿಂದ ಬಹುತೇಕ ರೈತರು ಕೃಷಿ ಕಾರ್ಯಕ್ಕೆ ಅಗತ್ಯ ಬಿತ್ತನೆ ಬೀಜ, ಪರಿಕರಗಳನ್ನು ಖರೀದಿಸಲು ನಗರಕ್ಕೆ ಬಂದು ಅಂಗಡಿಗಳು ಬಂದ್ ಆಗಿದ್ದನ್ನು ಕಂಡು ವಾಪಸು ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು.
ತಾಲೂಕು ಕೀಟನಾಶಕ, ರಸಗೊಬ್ಬರ, ಬಿತ್ತನೆಬೀಜ ಮಾರಾಟಗಾರರ ಸಂಘದ ಸದಸ್ಯರು ತಾಲೂಕು ಕಚೇರಿ ಆವರಣದಲ್ಲಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ರಸಗೊಬ್ಬರ ಮತ್ತು ಇನ್ನಿತರ ಕೃಷಿ ಪರಿಕರಗಳ ಮಾರಾಟದಲ್ಲಿ ಕೆಲ ಕಠಿಣ ನಿಯಮಗಳನ್ನು ಜಾರಿಗೊಳಿಸಿ ವ್ಯಾಪಾರ ವಹಿವಾಟಿಗೆ ತೊಂದರೆ ನೀಡುತ್ತಿದೆ. ರೈತರಿಗೆ ರಸಗೊಬ್ಬರ ವಿತರಣೆ ವೇಳೆ ಫಾರ್ಮರ್ಸ್‌ ಐಡೆಂಟಿಫಿಕೇಷನ್ ಡಾಕ್ಯುಮೆಂಟೇಷನ್(ಎಫ್‌ಐಡಿ) ಕಡ್ಡಾಯಗೊಳಿಸಿರುವುದು ಸರಿಯಲ್ಲ. ಇದರಿಂದ ರೈತರು ಮತ್ತು ವ್ಯಾಪಾರಸ್ಥರಿಗೂ ಅನನುಕೂಲವಾಗಿದೆ. ಅಲ್ಲದೆ ಯೂರಿಯಾ ಇತರ ರಸಗೊಬ್ಬರ ಖರೀದಿ ವೇಳೆ ಕಂಪನಿಗಳು ಟಾನಿಕ್‌ಗಳನ್ನು ಲಿಂಕ್ ಮಾಡಿ ಖರೀದಿಸಲೇಬೇಕು ಎಂದು ಕಡ್ಡಾಯಗೊಳಿಸಿರುವುದು ಸರಿಯಲ್ಲ. ಬೇಡಿಕೆ ಇಲ್ಲದ ವಸ್ತುಗಳ ದಾಸ್ತಾನು ವ್ಯಾಪಾರಸ್ಥರಿಗೆ ಹೊರೆಯಾಗುತ್ತಿದೆ. ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ಬೇಡಿಕೆ ಆಧಾರದಡಿ ಸಮರ್ಪಕವಾಗಿ ವಿತರಿಸಬೇಕು. ಸರ್ಕಾರ ತಾನು ವಿಧಿಸಿರುವ ಇಂತಹ ಕೆಲ ನಿಯಮಗಳನ್ನು ಸಡಿಲಗೊಳಿಸಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಸಂಘದ ಸದಸ್ಯರಾದ ಗಿರೀಶ್, ನಟೇಶ್, ಬೀರೇಶ್ ಮುಂತಾದವರು ಭಾಗವಹಿಸಿದ್ದರು.