ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಹಾಯಕ ನೋಂದಣಾಧಿಕಾರಿ ಮಂಜುನಾಥ್ ಮಾತನಾಡಿದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಅಮರನಾಥ್, ಕಿರಣ್ ಕುಮಾರ್, ಚುನಾವಣಾ ಶಿರಸ್ತೇದಾರ್ ಎ.ಪ್ರಕಾಶ್ ಇತರರಿದ್ದರು. 
ಮೈಸೂರು

658 ಜನರಿಂದ ಆನ್‌ಲೈನ್‌ನಲ್ಲಿ

ಹುಣಸೂರು :

ತಾಲೂಕಿನಲ್ಲಿ 658 ಜನ ಆನ್‌ಲೈನ್ ಮೂಲಕ ಎನ್ಯುಮರೇಷನ್ ಫಾರಂ(ಮತದಾರರ ಗಣತಿ ನಮೂನೆ) ಸಲ್ಲಿಸಿದ್ದು, ಈ ಎಲ್ಲ ಅರ್ಜಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಸಹಾಯಕ ನೋಂದಣಾಧಿಕಾರಿ, ತಹಸೀಲ್ದಾರ್ ಜೆ.ಮಂಜುನಾಥ್ ತಿಳಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಚುನಾವಣಾ ವಿಭಾಗದಿಂದ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳೊಂದಿಗಿನ ಸಭೆಯಲ್ಲಿ ಮಾಹಿತಿ ನೀಡಿದರು. ತಾಲೂಕಿನಲ್ಲಿ ಒಟ್ಟು 2,53, 248 ಮತದಾರರ ಪೈಕಿ 34,582(ಶೇ.14.70) ಜನರು ಮತದಾರರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಚುನಾವಣಾ ಆಯೋಗ ನೀಡಿದ್ದ ವೆಬ್‌ಸೈಟ್ ಮೂಲಕ 658 ಜನ ಎನ್ಯುಮರೇಷನ್ ಫಾರಂ ಸಲ್ಲಿಸಿದ್ದು, ಎಲ್ಲರ ಫಾರಂಗಳನ್ನು ಡಿಜಿಟೈಸ್ ಮಾಡಲಾಗಿದೆ. ಎಎಸ್‌ಡಿಡಿಒ(ಆಬ್ಸೆಂಟ್, ಶಿಫ್ಟೆಡ್, ಡೆತ್, ಡಿಲೀಟ್ ಆ್ಯಂಡ್ ಅದರ್) ಪ್ರಕಾರ 34,582 ಜನ ಪಟ್ಟಿಯಿಂದ ಹೊರಬಿದ್ದಿದ್ದು, ಈ ಪೈಕಿ 11,935 ಜನ ನಿಧನರಾಗಿದ್ದಾರೆ. 13,227 ಜನ ಬೇರಡೆ ವರ್ಗಾವಣೆಗೊಂಡಿದ್ದಾರೆ. 4,459 ಜನ ಎರಡು ಕಡೆ ನೋಂದಾಯಿತರಾಗಿದ್ದು, 4,882 ಜನ ಸ್ಥಳದಲ್ಲಿ ಇಲ್ಲ ಎಂಬುದ ಸೇರಿದಂತೆ ಇತರ ಕಾರಣಗಳಿಂದ 79 ಜನ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದರು.

ಸದ್ಯ ಎಲ್ಲ ರಾಜಕೀಯ ಪಕ್ಷಗಳಿಗೂ ಎಎಸ್‌ಡಿಡಿಒ ಪಟ್ಟಿಯನ್ನು ಒದಗಿಸಲಾಗಿದೆ. ಆ.8ರೊಳಗೆ ಪಟ್ಟಿಯಲ್ಲಿರುವ ವರ್ಗಾವಣೆಯಾದ ಮತದಾರ ಇಲ್ಲೇ ಇದ್ದಲ್ಲಿ, ಬಿಎಲ್‌ಒಗಳು ಮೂರು ಬಾರಿ ಮನೆಗೆ ಬಂದಾಗಲೂ ಗೈರಾದವರು ಇರುವ ಸ್ಥಳದ ಮಾಹಿತಿ ಮುಂತಾದ ವಿಷಯಗಳನ್ನು ಬಿಎಲ್‌ಒಗಳಿಗೆ ನೀಡಿದಲ್ಲಿ ಅಂತಹ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗುವುದು. ಅರ್ಹರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲು ಎಲ್ಲರೂ ಕಾರ್ಯ ನಿರ್ವಹಿಸೋಣ ಎಂದರು.

ಸಭೆಯಲ್ಲಿ ಕಾಂಗ್ರೆಸ್ ಬಿಎಲ್‌ಎ ಎಚ್.ಪಿ.ಅಮರನಾಥ್, ಬಿಜೆಪಿಯ ಕಿರಣ್‌ಕುಮಾರ್, ಬಿಎಸ್‌ಪಿಯ ಕೃಷ್ಣ ಸೇರಿದಂತೆ ಬಿಎಲ್‌ಎ 2ಗಳು, ಚುನಾವಣಾ ಶಿರಸ್ತೇದಾರ್ ಎ.ಪ್ರಕಾಶ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.