ಚಪ್ಪರದಹಳ್ಳಿಯಲ್ಲಿ ಉತ್ತಮ ಮಳೆಯಾಗಲಿ, ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ಕಪ್ಪೆಗಳಿಗೆ ಮದುವೆ ಮಾಡಿಸಿ, ವಿಶೇಷ ಪೂಜೆಯೊಂದಿಗೆ ಮೆರವಣಿಗೆ ಮಾಡಲಾಯಿತು. 
ಮೈಸೂರು

ಚಪ್ಪರದಹಳ್ಳಿಯಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ

ನಾಗೇಶ ಎಸ್
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಉತ್ತಮ ಮಳೆಯಾಗಲಿ, ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ಸೋಮವಾರ ಗ್ರಾಮಸ್ಥರು ಕಪ್ಪೆಗಳಿಗೆ ಮದುವೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದ ಹಿರಿಯರು ಕಪ್ಪೆಗಳನ್ನು ವಧು-ವರರಂತೆ ಅಲಂಕರಿಸಿ, ಹೂಮಾಲೆ ಹಾಕಿ, ಅರಿಶಿಣ-ಕುಂಕುಮ, ಮಂಗಳಸೂತ್ರ ಸೇರಿದಂತೆ ಹಿಂದೂ ಸಂಪ್ರದಾಯದಂತೆ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಮಳೆ ದೇವರ ಕೃಪೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಕಪ್ಪೆಗಳನ್ನು ಒಂದು ಕಂಬದ ಮೇಲೆ ಕೂರಿಸಿ, ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಉತ್ತಮ ಮಳೆಯಾಗಿ ರೈತರ ಬೆಳೆ ಸಮೃದ್ಧಿಯಾಗಲೆಂದು ಪ್ರಾರ್ಥಿಸಿದರು.
ಗ್ರಾಮದ ಹಿರಿಯರು, ರೈತರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಭಾಗವಹಿಸಿದ್ದರು.