ಕೆ.ಆರ್.ನಗರ ತಾಲೂಕಿನ ಕನುಗನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಕೆ.ಎನ್. ದಿನೇಶ್ ಉದ್ಘಾಟಿಸಿದರು. ಶಿವಪ್ರಸಾದ್, ವೈದ್ಯರಾದ ಕೃಷ್ಣಮೂರ್ತಿ, ಪೂರ್ಣಿಮಾ, ಕೇಶವನ್, ರೂಪಾ, ಜಯರಾಜ್ ಇನ್ನಿತರರು ಇದ್ದರು.
ಕೆ.ಆರ್.ನಗರ: ತಾಲೂಕಿನ ಕನುಗನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕನುಗನಹಳ್ಳಿ ಹಿತರಕ್ಷಣಾ ವೇದಿಕೆ ಹಾಗೂ ಅಶ್ವಿನಿ ಆಯುರ್ವೇದ ಮಾರ್ಕೆಟಿಂಗ್ ಸಂಸ್ಥೆ ವತಿಯಿಂದ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮದವರಾದ ಮಾಜಿ ಸಚಿವ ಎಸ್. ನಂಜಪ್ಪ ಅವರ 12ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಎಂಐಟಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಅಭಿಜ್ಞಾ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಆಯುರ್ವೇದ , ಕೂರ್ಗಳ್ಳಿ ಯೋಗ ಪ್ರಜ್ಞಾ ಕುಟೀರದಿಂದ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ 1,000 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು.
ಶಿಬಿರದಲ್ಲಿ ಕೀಲು ನೋವು, ಅಸ್ತಮಾ, ಚರ್ಮ ಕಾಯಿಲೆ, ಥೈರಾಯ್ಡ, ಕಿಡ್ನಿಯಲ್ಲಿ ಕಲ್ಲು, ಮೂಲಾವ್ಯಾದಿ, ಮಂಡಿ ನೋವು, ಗ್ಯಾಸ್ಟ್ರಿಕ್, ನರರೋಗ, ಸಂಧಿವಾತ, ಸಕ್ಕರೆ ಕಾಯಿಲೆ, ಸ್ತ್ರೀರೋಗ, ಕೂದಲು ಉದುರುವಿಕೆ ಸೇರಿದಂತೆ ನಾನಾ ಸಮಸ್ಯೆಗಳಿಗೆ ಚಿಕಿತ್ಸೆ ಹಾಗೂ ಮಾರ್ಗದರ್ಶನ ನೀಡಲಾಯಿತು.
ಕೆ.ಆರ್.ನಗರದ ಶರತ್ ಕಣ್ಣಿನ ಆಸ್ಪತ್ರೆ ವತಿಯಿಂದ 500ಕ್ಕೂ ಹೆಚ್ಚು ಮಂದಿಗೆ ಕಣ್ಣು ತಪಾಸಣೆ ಮಾಡಿ ಉಚಿತ ಕನ್ನಡಕ ವಿತರಿಸಲಾಯಿತು. ಶಿಬಿರಕ್ಕೆ ಎಸ್.ನಂಜಪ್ಪ ಅವರ ಹಿರಿಯ ಪುತ್ರ ಕೆ.ಎನ್.ದಿನೇಶ್ ಹಾಗೂ ಸಂಬಂಧಿ ಶಿವಪ್ರಸಾದ್ ಚಾಲನೆ ನೀಡಿದರು. ವೈದ್ಯರಾದ ಕೃಷ್ಣಮೂರ್ತಿ, ಪೂರ್ಣಿಮಾ, ಕೇಶವನ್, ರೂಪಾ, ಜಯರಾಜ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದರು.