ಮೈಸೂರಿನಲ್ಲಿ ಶನಿವಾರ ಏರ್ಪಡಿಸಿದ್ದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸದ್ಗುರು ಶ್ರೀಮಧುಸೂದನ ಸಾಯಿ ಅವರಿಗೆ ಪ್ರಶ್ನೆಗಳನ್ನು ಕೇಳಿದರು.
- ಸುಲಭವಾಗಿ ಸಿಗುತ್ತದೆ ಎಂದರೆ ಎಲ್ಲರೂ ಅಪೇಕ್ಷೆ ಪಡುವ ಕಾಲ ಇದಾಗಿದೆ
- ನಮ್ಮ ತಂಡ ವಿದ್ಯಾರ್ಥಿಗಳ ಮನೆಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ ದಾಖಲು ಮಾಡುತ್ತದೆ. ಇದರಿಂದ ದಾನಿಗಳ ಮೂಲಕ ಭಗವಂತ ನೀಡಿದ ಸೌಲಭ್ಯ ಅರ್ಹರಿಗೆ ತಲುಪಿದ ತೃಪ್ತಿ ನಮ್ಮದಾಗಿದೆ
ಮೈಸೂರು:ಉಚಿತವಾಗಿ ವಿಷ ಹಂಚಿದರೂ ಇನ್ನೊಂದು ಬಾಟಲಿ ಕೊಡಿ ಎಂದು ಕೇಳುವ ಇಂದಿನ ಕಾಲದಲ್ಲಿ ಅರ್ಹರಿಗೆ ಸವಲತ್ತು ದೊರೆಯುವಂತೆ ಮಾಡುವುದು ಅತ್ಯಂತ ಜವಾಬ್ದಾರಿ ಕೆಲಸ ಎಂದು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕ ಸದ್ಗುರು ಶ್ರೀಮಧುಸೂದನ ಸಾಯಿ ಅಭಿಪ್ರಾಯಪಟ್ಟರು.
‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ನಿಂದ ನಗರದಲ್ಲಿ ಆಯೋಜಿಸಿದ್ದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಸಭಿಕರು ಕೇಳಿದ ಪ್ರಶ್ನೆಗೆ ಸದ್ಗುರು ಉತ್ತರಿಸಿದರು.
ಸುಲಭವಾಗಿ ಸಿಗುತ್ತದೆ ಎಂದರೆ ಎಲ್ಲರೂ ಅಪೇಕ್ಷೆ ಪಡುವ ಕಾಲ ಇದಾಗಿದೆ. ಹಾಗಾಗಿ ನಮ್ಮ ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ನಿಂದ ಅರ್ಹರನ್ನು ಗುರುತಿಸಿ ಅಗತ್ಯ ಇರುವವರಿಗೆ ಉಚಿತವಾಗಿ ಸೌಲಭ್ಯ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ನಮ್ಮ ಮಿಷನ್‌ನಿಂದ ಉಚಿತವಾಗಿ ಶಿಕ್ಷಣ, ಆರೋಗ್ಯ ಹಾಗೂ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶವನ್ನು ನೀಡುತ್ತಾ ಬರುತ್ತಿದ್ದೇವೆ. ಪ್ರಾಥಮಿಕ ಶಾಲೆಯಿಂದ ವೈದ್ಯಕೀಯ, ಇಂಜಿನಿಯರ್‌ವರೆಗೂ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ನಮ್ಮ ತಂಡ ವಿದ್ಯಾರ್ಥಿಗಳ ಮನೆಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ ದಾಖಲು ಮಾಡುತ್ತದೆ. ಇದರಿಂದ ದಾನಿಗಳ ಮೂಲಕ ಭಗವಂತ ನೀಡಿದ ಸೌಲಭ್ಯ ಅರ್ಹರಿಗೆ ತಲುಪಿದ ತೃಪ್ತಿ ನಮ್ಮದಾಗಿದೆ ಎಂದು ಹೇಳಿದರು.
ಒಂದು ಕುಟುಂಬದಲ್ಲಿ ಕೆಲಸ ಮಾಡುವ ಏಕೈಕ ವ್ಯಕ್ತಿಗೆ ಕಾಯಿಲೆ ಬಂದಾಗ ಇಡೀ ಕುಟುಂಬದ ವ್ಯವಸ್ಥೆ ಕುಸಿದು ಬೀಳುತ್ತದೆ. ತಾಯಿಯೊಬ್ಬಳು ಏನೂ ಮಾಡಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂಥ ಸಂದರ್ಭದಲ್ಲಿ ಸಾಮಾಜಿಕವಾಗಿ ಎಲ್ಲರೂ ಅಂಥ ಕುಟುಂಬಗಳಿಗೆ ಆಸರೆಯಾಗಬೇಕು ಎಂದು ಹೇಳಿದರು.
ವೃದ್ಧಾಪ್ಯ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವಿದೇಶದ ಮಾದರಿ ಭಾರತದಲ್ಲೂ ಸಾಮಾಜಿಕ ಸುರಕ್ಷಾ ಸೇವೆಗಳು ಇನ್ನಷ್ಟು ಉತ್ತಮಗೊಳ್ಳಬೇಕಾಗಿದೆ. ಆದರೆ ನಮ್ಮ ದೇಶದಲ್ಲಿ ಇಂಥವರಿಗೆ ಹಣಕಾಸು ಭದ್ರತೆ ಒದಗಿಸುವ ಯೋಜನೆಗಳೇ ಇಲ್ಲ ಎಂದು ವಿಷಾದಿಸಿದರು.
ಇಂದಿನ ತಲೆಮಾರು ನಮ್ಮ ಮಾತು ಕೇಳುತ್ತಿಲ್ಲ, ಸಂಪ್ರಾಯ ಆಚರಿಸುತ್ತಿಲ್ಲ ಎಂದು ಹೇಳುವ ಹಿರಿಯರು ನಮ್ಮ ಆಚರಣೆಗಳ ಕುರಿತು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಪ್ರಶ್ನೆ ಕೇಳುವವರು ಮಾತ್ರವೇ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ. ಹಾಗಾಗಿ ಪ್ರಶ್ನೆ ಕೇಳಲು ಆರಂಭಿಸಿರುವ ‘ಜೆನ್ ಜಿ’ ತಲೆಮಾರು ವಿಕಸನವಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ಇಂಟರ್‌ನೆಟ್ ಸಿಗುವೆಡೆ ಹೋಗುತ್ತೇವೆ:
ದೇವರು ಎಲ್ಲ ಕಡೆ ಇರುವುದರಿಂದ ದೇವರ ಗುಡಿಗೆ ನಾವು ಏಕೆ ಹೋಗಬೇಕು. ಮನೆಯಲ್ಲಿಯೇ ದೇವರ ಮನೆಯಲ್ಲಿ ಪೂಜೆ ಮಾಡಬಹುದಲ್ಲ ಎಂದು ಸಾಕಷ್ಟು ಜನರ ಕೇಳುತ್ತಾರೆ. ನಾವು ಮೊಬೈಲ್ ಬಳಸುವಾಗ ಇಂಟರ್‌ನೆಟ್ ಎಲ್ಲ ಕಡೆ ಇದ್ದರೂ ಯಾವುದೋ ಒಂದು ಮೂಲೆಗೆ ಹೋಗಿ ಕನೆಕ್ಟ್ ಮಾಡಿಕೊಳ್ಳ್ಳುತ್ತೇವೆ. ಅದೇ ರೀತಿ ದೇವಸ್ಥಾನದಲ್ಲಿ ದೇವರು ಇರುವುದರಿಂದ ಅಲ್ಲಿಗೆ ಹೋಗುತ್ತೇವೆ ಎಂದು ಸದ್ಗುರು ಶ್ರೀಮಧುಸೂದನ ಸಾಯಿ ದೇವರ ಬಗ್ಗೆ ವಿವರಿಸಿದರು.
ಮೈಸೂರಿಗೂ ಮುದ್ದೇನಹಳ್ಳಿಗೂ ಹಿಂದಿನಿಂದಲೂ ಅವಿನಾಭವಾವ ಸಂಬಂಧವಿದೆ. ಮುದ್ದೇನಹಳ್ಳಿಯಲ್ಲಿ ಹುಟ್ಟಿದ ಸರ್ ಎಂ. ವಿಶ್ವೇಶ್ವರಯ್ಯ ಅವರು ಮೈಸೂರಿನ ದಿವಾನರಾಗಿದ್ದರು. ಹಾಗಾಗಿ ನಮ್ಮ ಮಿಷನ್‌ನಿಂದ ಮೈಸೂರಿನ ಹುಣಸೂರಿನಲ್ಲಿಯೂ ಉಚಿತ ಶಾಲೆಯನ್ನು ತೆರೆದು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಮುಂದೆ ಇನ್ನಷ್ಟು ಸೇವಾ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗೋಪಿಕಾ ಪರ್ಫ್ಯೂಮರಿ ವರ್ಕ್ಸ್ ನಿರ್ದೇಶಕ ಎಸ್.ಎಲ್.ರಾಮಚಂದ್ರ, ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಕುರಿತು ತಿಳಿಸಿಕೊಟ್ಟರು. ಶ್ರೀಸತ್ಯಸಾಯಿ ಅನಂತನಿಕೇತನಂ ವಿದ್ಯಾರ್ಥಿ ಕುಶಾಲ್ ಇತರರು ಅನಿಸಿಕೆ ಹಂಚಿಕೊಂಡರು.
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮಾರ್ಗದರ್ಶಕ, ಮೈಸೂರು ವಿವಿ ನಿವೃತ್ತ ಕುಲಪತಿ ಪ್ರೊ.ಜೆ.ಶಶಿಧರ್‌ಪ್ರಸಾದ್, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಲೋಕನಾಥ್, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜ್ಞಾನಪ್ರಕಾಶ್, ನಾವೆಲ್ ಟಿಶ್ಯೂಸ್ ಸಂಸ್ಥೆಯ ನಿರ್ದೇಶಕ ಎ.ಬಿ.ದೊಡ್ಡಮನಿ, ಅರವಿಂದ ಪರ್ಫ್ಯೂಮರಿ ಸಂಸ್ಥೆಯ ರಿಷಿ, ಮಂಗಳೂರು ಗಣೇಶ್ ಬೀಡಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಗನ್ನಾಥ ಶೆಣೈ, ಉದ್ಯಮಿ ಮನೋಜ್ ಶೆಣೈ, ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಗಿರಿಧರ್, ಭಾರತೀಯ ಭಾಷಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಬಸವರಾಜ ಇತರರಿದ್ದರು.