ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿ ಹೊಸಕೊಪ್ಪಲು ಗ್ರಾಮಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ ಶಾಸಕ ಡಿ.ರವಿಶಂಕರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಮುಖಂಡರಾದ ಬಸವೇಗೌಡ, ಮಂಜುನಾಥ್, ಕೆ.ಎಸ್.ರೇವಣ್ಣ, ರಘು, ಮಹದೇವ್, ಗಿರೀಶ್, ಯೋಗೇಶ್, ರಾಮೇಗೌಡ, ಲಕ್ಷ್ಮಣ್, ಕೃಷ್ಣೇಗೌಡ, ಮಾರ್ಕ್ ಮಹದೇವ್, ಕೆ.ಎಂ.ಶಂಕರ್ ಇನ್ನಿತರರಿದ್ದರು. 
ಮೈಸೂರು

ಶ್ರಮಿಕ ವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ಆರಂಭ

ಕೆ.ಆರ್.ನಗರ: ಸರ್ಕಾರದ ವತಿಯಿಂದ ಶ್ರಮಿಕ ವರ್ಗದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕಾರ್ಮಿಕ ಇಲಾಖೆ ವತಿಯಿಂದ ಶ್ರಮಿಕ ಶಾಲೆ ಆರಂಭಿಸುತ್ತಿದ್ದು, ಈ ಶಾಲೆಯನ್ನು ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕಾಳೇನಹಳ್ಳಿ ಗ್ರಾಮದ ಭಾಗದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ತಾಲೂಕಿನ ಕಾಳೇನಹಳ್ಳಿ ಹೊಸಕೊಪ್ಪಲು ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಆಲಿಸಿ ಮಾತನಾಡಿದ ಅವರು, ಕೆ.ಆರ್.ನಗರ ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳಾದ ಮಾರಿಗುಡಿಕೊಪ್ಪಲು, ಕಾಳೇನಹಳ್ಳಿ, ಕೆಂಪನಕೊಪ್ಪಲು ಮತ್ತು ಕಾಳೇನಹಳ್ಳಿ ಹೊಸಕೊಪ್ಪಲು ಗ್ರಾಮಗಳಲ್ಲಿ ಬಹತೇಕ ಜನರು ಶ್ರಮಿಕ ವರ್ಗದವರಾಗಿದ್ದು, ಶಾಲೆ ಆರಂಭವಾಗುವುದರಿಂದ ಅವರ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
6ರಿಂದ 10ನೇ ತರಗತಿಯವರೆಗೆ ಉಚಿತವಾಗಿ ಶಿಕ್ಷಣ ನೀಡಲು ಸರ್ಕಾರ ಶ್ರಮಿಕಶಾಲೆ ಆರಂಭ ಮಾಡುತ್ತಿದ್ದು, ಅದಕ್ಕೆ ಬೇಕಾಗಿರುವ 8-10 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸುವಂತೆ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ದೂರವಾಣಿ ಮೂಲಕ ಸೂಚನೆ ನೀಡದ ಶಾಸಕರು, ಅದಕ್ಕೆ ಗ್ರಾಮಸ್ಥರು ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಕೋರಿದರು.
ಈ ಭಾಗದಲ್ಲಿ ಈಗಾಗಲೇ ಆದರ್ಶ ವಿದ್ಯಾಲಯ ಆರಂಭ ಮಾಡಲಾಗಿದ್ದು 6 ರಿಂದ 12ನೇ ತರಗತಿಯಲ್ಲಿ ಸುಮಾರು 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಹಿಂದುಳಿದ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ ಶಾಸಕ ಡಿ.ರವಿಶಂಕರ್, ಶ್ರಮಿಕ ಶಾಲೆ ಆರಂಭಗೊಂಡ ನಂತರ ಇನ್ನಷ್ಟು ಹಿಂದುಳಿದ ವರ್ಗದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಕಾಳೇನಹಳ್ಳಿ ಹೊಸಕೊಪ್ಪಲು ಗ್ರಾಮದ ಎಲ್ಲ ರಸ್ತೆಗಳನ್ನು ಕಾಂಕ್ರೀಟೀಕರಣ ಮತ್ತು ಬಾಕ್ಸ್ ಚರಂಡಿ ನಿರ್ಮಾಣಕ್ಕಾಗಿ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿಸುವ ಭರವಸೆ ನೀಡಿದ ಶಾಸಕರು, ಗ್ರಾಮದ ಮಾರಮ್ಮ ದೇವರ ದೇವಸ್ಥಾನದ ಆವರಣವನ್ನು ಕಾಂಕ್ರೀಟೀಕರಣ ಹಾಗೂ ದೇವಾಲಯಕ್ಕೆ ಛಾವಣಿ ನಿರ್ಮಾಣ ಮಾಡಲು ವೈಯಕ್ತಿಕವಾಗಿ ಆರ್ಥಿಕ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಶಾಸಕ ಡಿ.ರವಿಶಂಕರ್ ಅವರನ್ನು ಗ್ರಾಮದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಮುಖಂಡರಾದ ಬಸವೇಗೌಡ, ಮಂಜುನಾಥ್ ಕೆ.ಎಸ್.ರೇವಣ್ಣ, ರಘು, ಮಹದೇವ್, ಗಿರೀಶ್, ಯೋಗೇಶ್, ರಾಮೇಗೌಡ, ಲಕ್ಷ್ಮಣ್, ಕೃಷ್ಣೇಗೌಡ, ಮಾರ್ಕ್ ಮಹದೇವ್, ಕೆ.ಎಂ.ಶಂಕರ್ ಇನ್ನಿತರರು ಹಾಜರಿದ್ದರು.