ಮೈಸೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 16.95 ಲಕ್ಷ ರೂ. ಪಡೆದು, ಬಳಿಕ ಕಾರನ್ನೂ ತೆಗೆದುಕೊಂಡು ಪರಾರಿಯಾಗಿರುವ ಆರೋಪದ ಮೇಲೆ ಪಿಡಬ್ಲುೃಡಿ ಕ್ಲಾಸ್ 3 ಗುತ್ತಿಗೆದಾರನೆಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ವಿನಾಯಕನಗರ ನಿವಾಸಿ ಶ್ರೀಕಂಠ ಅವರು ನೀಡಿರುವ ದೂರಿನ ಮೇರೆಗೆ, ದೊಡ್ಡಬಳ್ಳಾಪುರ ಮೂಲದ ಆರ್.ಎನ್. ಹೇಮಂತ್ ಕುಮಾರ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರಿನ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಸಂಬಂಧಿಕರ ಮೂಲಕ ಪರಿಚಯವಾದ ಹೇಮಂತ್ ಕುಮಾರ್, ತಾನು ಡಬ್ಲುೃಡಿ ಕ್ಲಾಸ್ 3 ಗುತ್ತಿಗೆದಾರನಾಗಿದ್ದು, ಶ್ರೀಕಂಠ ಅವರ ಅಕ್ಕನ ಮಗಳು ಸಹನಮೂರ್ತಿಗೆ ಡಬ್ಲುೃಡಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ.
ಇದಕ್ಕಾಗಿ ಒಟ್ಟು30 ಲಕ್ಷ ರೂ. ಬೇಡಿಕೆಯಿಟ್ಟಿದ್ದು, ಮೊದಲ ಹಂತವಾಗಿ ವಿವಿಧ ದಿನಗಳಲ್ಲಿ ಆನ್‌ಲೈನ್ ವರ್ಗಾವಣೆ, ಇತರರ ಖಾತೆಗಳ ಮೂಲಕ ಹಣ ವರ್ಗಾವಣೆ ಹಾಗೂ ನಗದು ಸೇರಿ ಒಟ್ಟು 16.95 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದಾದ ಬಳಿಕ, 29 ಮಾರ್ಚ್ 2026 ರಂದು ಹೆಬ್ಬಾಳ್‌ನಲ್ಲಿ ಶ್ರೀಕಂಠ ಅವರನ್ನು ಭೇಟಿಯಾದ ಆರೋಪಿಯು, ಅವರ ಪತ್ನಿ ಎಚ್.ಡಿ. ಗೀತಾ ಹೆಸರಿನಲ್ಲಿದ್ದ ಕಿಯಾ ಸೋನೆಟ್ ಕಾರನ್ನು ಸ್ವಲ್ಪ ಸಮಯಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿ ಪಡೆದಿದ್ದಾನೆ. ಆದರೆ, ಕಾರನ್ನು ಹಿಂದಿರುಗಿಸದೇ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಣ ನೀಡಿದ ಬಳಿಕವೂ ಉದ್ಯೋಗ ಕೊಡಿಸದೇ, ಸಂಪರ್ಕಕ್ಕೂ ಸಿಗದೆ ವಂಚನೆ ಎಸಗಿರುವುದಾಗಿ ಆರೋಪಿಸಿರುವ ಶ್ರೀೀಕಂಠ ಅವರು ದೂರು ನೀಡಿದ್ದು, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.