ಸಾಂದರ್ಭಿಕ ಚಿತ್ರ 
ಮೈಸೂರು

ಷೇರುಮಾರುಕಟ್ಟೆ ಹೆಸರಿನಲ್ಲಿ ವಂಚನೆ: ಮೈಸೂರಿನಲ್ಲಿ 1.10 ಕೋಟಿ ರೂ. ಕಳೆದುಕೊಂಡ ವ್ಯಕ್ತಿ

ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದು ಸಾಮಾಜಿಕ ಜಾಲತಾಣದಲ್ಲಿ ಬಂದ ಮೆಜೇಸ್‌ವೊಂದನ್ನು ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 1.10 ಕೋಟಿ ರೂ. ಕಳೆದುಕೊಂಡಿದ್ದಾರೆ.
ವಿದ್ಯಾರಣ್ಯಪುರಂ ನಿವಾಸಿ ಜೆ. ವಿಕ್ರಂರಾಜ್ ಅರಸ್ ಹಣ ಕಳೆದುಕೊಂಡವರು. ವಿಕ್ರಂರಾಜ್ ಅರಸ್ ಅವರ ವಾಟ್ಸ್‌ಅಪ್ ನಂಬರಿಗೆ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹಣ ಗಳಿಸಬಹುದು ಎಂಬ ಮೆಸೇಜ್‌ವೊಂದು ‘ಎಚ್02-ಸ್ಟಾಕ್ ಮಾರ್ಕೆಟ್ ಥಿಂಕ್ ಟ್ಯಾಂಕ್’ ಗ್ರೂಪ್‌ನಿಂದ ಬಂದಿತ್ತು.
ವಾಟ್ಸ್‌ಗ್ರೂಪ್‌ನಲ್ಲಿ 23-4-2026 ರಂದು ಬಂದ ಸಂದೇಶವನ್ನು ಆಧರಿಸಿ ವಿಕ್ರಂರಾಜ್ ಅರಸ್ ಅವರು ‘ಐಐಎಫ್‌ಎಲ್ ಇನ್ವೆಸ್ಕೊ ಸ್ಟಾಕ್ ಮಾರ್ಕೆಟ್ ಕಂಪನಿ’ ಕುರಿತು ಮಾಹಿತಿ ಕಲೆ ಹಾಕಿದರು. ಈ ಕಂಪನಿಯು ಅಸ್ತಿತ್ವದಲ್ಲಿದ್ದ ಹಿನ್ನೆಲೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದರು. ನಂತರ ಕಂಪನಿಯ ಟೀನಾ ಮಲ್ಹೋತ್ರಾ ಎಂಬವರು ಹಣ ಹೂಡಿಕೆ ಮಾಡಲು ಉತ್ತೇಜಿಸಿದರು.
ನಂತರ ನಕಲಿ ಕಂಪನಿಯವರು ಹೇಳಿದಂತೆ ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಂಡರು. ಅದಾದ ನಂತರ ವಾಟ್ಸ್‌ಆ್ಯಪ್ ಮೆಸೇಜ್‌ಗಳನ್ನು ಕಳುಹಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ಹಾಕಿಸಿಕೊಂಡರು. ಹಂತ ಹಂತವಾಗಿ ಇವರು ಒಟ್ಟು 1,10,04,600 ರೂ. ಹೂಡಿಕೆ ಮಾಡಿದ್ದಾರೆ. ಹೂಡಿಕೆ ಹಣವನ್ನು ಆ್ಯಪ್ ಮೂಲಕ ವಿತ್‌ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಬ್ರೋಕರೇಜ್ ಕಟ್ಟುವಂತೆ ಹೇಳಿ ವಿತ್‌ಡ್ರಾಗೆ ಅವಕಾಶ ನೀಡಲಿಲ್ಲ. ಇದರಿಂದ ಅನುಮಾನಗೊಂಡ ವಿಕ್ರಂರಾಜ್ ಅರಸ್ ಸೆನ್ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.