ಸೈಬರ್ ಕ್ರೈಮ್ 
ಮೈಸೂರು

ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ವಂಚನೆ

ಪ್ರಮುಖ ಮುಖ್ಯಾಂಶಗಳು

  • ಒಬ್ಬರು 47.44 ಲಕ್ಷ ರೂ. ಹಾಗೂ ಮತ್ತೊಬ್ಬರು 24.25 ಲಕ್ಷ ರೂ. ವಂಚನೆ
  • ಹೂಡಿಕೆಗೆ ಲಾಭ ನೀಡಿ ನಂತರ ಮೋಸದ ಬಲೆಗೆ ಬೀಳಿಸಿದ್ದಾರೆ.
ಮೈಸೂರು: ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಒಬ್ಬರು 47.44 ಲಕ್ಷ ರೂ. ಹಾಗೂ ಮತ್ತೊಬ್ಬರು 24.25 ಲಕ್ಷ ರೂ. ವಂಚನೆಗೊಳಗಾಗಿದ್ದಾರೆ. 
ಜೆ.ಪಿ.ನಗರದ ವ್ಯಕ್ತಿ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡುವ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆ ಮೂಲಕವೇ ತರಬೇತಿ ಪಡೆದಿದ್ದಾರೆ. ನಂತರ ವಂಚಕರು ತಿಳಿಸಿದಂತೆ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ 47.44 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ನಂತರ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದಿದ್ದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಮತ್ತೊಂದು ಪ್ರಕರಣದಲ್ಲಿ ವಿದ್ಯಾರಣ್ಯಪುರಂ ನಿವಾಸಿಯೊಬ್ಬರಿಗೆ ಬ್ಲಾಕ್ ಟ್ರೇಡ್ ಹಾಗೂ ಐಪಿಒಗಳಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿ, 24.25 ಲಕ್ಷ ರೂ. ವಂಚಿಸಿದ್ದಾರೆ. ಮೊದಲ ಹೂಡಿಕೆಗೆ ಲಾಭ ನೀಡಿ ನಂತರ ಮೋಸದ ಬಲೆಗೆ ಬೀಳಿಸಿದ್ದಾರೆ. ಎರಡು ಪ್ರಕರಣಗಳು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಕ್ರೆಡಿಟ್ ಕಾರ್ಡ್‌ಗೂ ಕನ್ನ:
ವ್ಯಾಟ್ಸ್ ಆ್ಯಪ್ ಖಾತೆಯನ್ನು ಹ್ಯಾಕ್ ಮಾಡಿ, ಕ್ರೆಡಿಟ್ ಕಾರ್ಡ್‌ನಿಂದ 91 ಸಾವಿರ ರೂ. ದೋಚಲಾಗಿದೆ. ಗಾಯತ್ರಿಪುರಂ ನಿವಾಸಿಯೊಬ್ಬರ ಮೊಬೈಲ್‌ಗೆ ವ್ಯಾಟ್ಸ್‌ಆ್ಯಪ್ ವೆರಿಫೈ ಎಂಬ ಸಂದೇಶ ಬಂದಿದೆ. ಬಳಿಕ ಒಮ್ಮೆಯೂ ಬಳಕೆ ಮಾಡದ ಕ್ರೆಡಿಟ್ ಕಾರ್ಡ್‌ನಿಂದ ಹಣ ಕಡಿತಗೊಂಡಿದೆ. ಅನುಮಾನಗೊಂಡ ಅವರು, ಆ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಯಾವ ರೀತಿ ಹಣ ದೋಚಲಾಗಿದೆ ಎಂಬ ಮಾಹಿತಿಯೇ ಹಣ ಕಳೆದುಕೊಂಡವರಿಗೆ ಗೊತ್ತಾಗುತ್ತಿಲ್ಲ. ಈ ಬಗ್ಗೆ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.