ಭವಿಷ್ಯದ ಭರವಸೆ ಎಥೆನಾಲ್​ 
ಮೈಸೂರು

ಎಥೆನಾಲ್ ಮಿಶ್ರಣ ಹೆಸರಿನಲ್ಲಿ ಧೋಖಾ

- ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಹೆಸರಿನಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರು ಹಾಗೂ ರೈತರಿಗೆ ಅನ್ಯಾಯ ಎಸಗುತ್ತಿದ್ದು, ಕಳೆದ 15 ತಿಂಗಳಲ್ಲಿ 1.68 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಪೆಟ್ರೋಲ್‌ನಲ್ಲಿ ಶೇ.30ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಒಂದು ಲೀಟರ್ ಮಿಶ್ರಿತ ಇಂಧನದ ವೆಚ್ಚ ಸುಮಾರು 98 ರೂ. ಆಗಿದ್ದರೂ ಗ್ರಾಹಕರಿಗೆ 112 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಪ್ರತಿ ಲೀಟರ್‌ಗೆ 14 ರಿಂದ 15 ರೂ. ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ರೈತರಿಂದ ಲೀಟರ್‌ಗೆ 60 ರಿಂದ 65 ರೂ.ದರದಲ್ಲಿ ಎಥೆನಾಲ್ ಖರೀದಿಸಲಾಗುತ್ತಿದ್ದು, ಇದರ ಲಾಭ ರೈತರು ಮತ್ತು ಗ್ರಾಹಕರಿಗೆ ತಲುಪುತ್ತಿಲ್ಲ. ಕೇಂದ್ರ ಸರ್ಕಾರ ಹಾಗೂ ಉತ್ಪಾದನಾ ಕಂಪನಿಗಳ ಹಿತಾಸಕ್ತಿಗೆ ಅನುಗುಣವಾಗಿ ನೀತಿ ರೂಪಿಸಲಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಶೇ.25ರಷ್ಟಿದ್ದರೆ, ಪ್ರತಿ ಲೀಟರ್‌ಗೆ ಕೇಂದ್ರ ಸರ್ಕಾರ 19.90 ರೂ. ಅಬಕಾರಿ ಸುಂಕ ವಿಧಿಸುತ್ತಿದೆ ಈ ಸುಂಕವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಂಟು ಜಿಲ್ಲೆಗಳ 65 ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಯಲ್ಲಿ ಶೇ.25.5ರಿಂದ ಶೇ.31.2ರಷ್ಟು ಎಥೆನಾಲ್ ಮಿಶ್ರಣ ಪತ್ತೆಯಾಗಿದೆ. ಈ ಕುರಿತು ತೈಲ ಕಂಪನಿಗಳಿಂದಲೂ ವರದಿ ಕೇಳಲಾಗಿದೆ ಎಂದು ತಿಳಿಸಿದರು.

ಅತಿಯಾದ ಎಥೆನಾಲ್ ಮಿಶ್ರಣದಿಂದ ವಾಹನಗಳ ಇಂಧನ ವ್ಯವಸ್ಥೆಯ ಬಿಡಿಭಾಗಗಳು ಹಾಳಾಗುತ್ತಿದ್ದು, ಮೈಲೇಜ್ ಕೂಡ ಕಡಿಮೆಯಾಗುತ್ತಿದೆ. ಕಳೆದ 15 ತಿಂಗಳಲ್ಲಿ ವಾಹನಗಳ ದುರಸ್ತಿಗೆ 62 ಸಾವಿರ ಕೋಟಿ ರೂ.ಹಾಗೂ ಬಿಡಿಭಾಗಗಳ ಬದಲಾವಣೆಗೆ 39 ಸಾವಿರ ಕೋಟಿ ರೂ.ವೆಚ್ಚವಾಗಿದೆ ಎಂದರು.

ಪೆಟ್ರೋಲ್ ಖರೀದಿಸುವಾಗ ಗ್ರಾಹಕರು ರಸೀದಿ ಹಾಗೂ ವಾಹನ ದುರಸ್ತಿ ಬಿಲ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ವಾಹನಗಳಿಗೆ ಹಾನಿಯಾದಲ್ಲಿ ಪರಿಹಾರಕ್ಕೆ ಕಾನೂನು ಹೋರಾಟ ನಡೆಸಲಾಗುವುದು. ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಪ್ರತಿ ಪೆಟ್ರೋಲ್ ಬಂಕ್‌ನಲ್ಲೂ ಮಿಶ್ರಣದ ಪ್ರಮಾಣವನ್ನು ಫಲಕದಲ್ಲಿ ಪ್ರದರ್ಶಿಸಬೇಕು. ತಪ್ಪಿತಸ್ಥ ತೈಲ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.