ಕನ್ನಡಾಂಬೆ ರಕ್ಷಣಾ ವೇದಿಕೆಯು ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಂಕರ ದೇವನೂರು, ಅರ್ಜುನ ಅವಧೂತ ಗುರೂಜಿ, ಡಾ.ಪಿ.ಶಿವರಾಜು, ಡಾ.ಎಸ್. ಶಿವರಾಜಪ್ಪ, ಅಂಶಿ ಪ್ರಸನ್ನಕುಮಾರ್, ಬಿ.ಬಿ. ರಾಜಶೇಖರ್ ಇತರರು ಇದ್ದರು. 
ಮೈಸೂರು

ಬಸವಣ್ಣನವರ ಆಶಯದಂತೆ ನಾಲ್ವಡಿ ಆಡಳಿತ: ಸಂಸದ ಯದುವೀರ ಅಭಿಮತ

ಮೈಸೂರು:ಕನ್ನಡವನ್ನು ಉಳಿಸುವುದು ಕೇವಲ ರಾಜರು, ಅರಮನೆ, ಸರ್ಕಾರದ ಜವಾಬ್ದಾರಿಯಲ್ಲ. ಸಮಸ್ತ ಕನ್ನಡಿಗರು ಕೂಡ ಇದಕ್ಕೆ ವಾರಸುದಾರರು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕನ್ನಡಾಂಬೆ ರಕ್ಷಣಾ ವೇದಿಕೆಯ 6ನೇ ವಾರ್ಷಿಕೋತ್ಸವ ಅಂಗವಾಗಿ ಖಿಲ್ಲೆ ಮೊಹಲ್ಲಾದ ಶ್ರೀ ನಟರಾಜ ಸಭಾಭವನದಲ್ಲಿ ಆಯೋಜಿಸಿದ್ದ ಬಸವ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ, ಪೌರಕಾರ್ಮಿಕರಿಗೆ ಉಚಿತ ಬಟ್ಟೆ ವಿತರಣೆ, ಸಹಪಂಕ್ತಿ ಭೋಜನ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ, ಭಾಷೆ, ಕಲೆ ಬೆಳವಣಿಗೆಗೆ ನಾಲ್ವಡಿ ಸೇರಿದಂತೆ ಹಲವರು ಕೊಡುಗೆ ನೀಡಿದ್ದಾರೆ. ಭಾಷೆ ಬೆಳವಣಿಗೆ ಕೇವಲ ಅರಮನೆ, ರಾಜ, ಮಹಾರಾಜರು, ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸಮಸ್ತ ಕನ್ನಡಿಗರು ಇದಕ್ಕೆ ವಾರಸುದಾರರಾಗಿದ್ದು, ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು.
ಹನ್ನೆರಡನೆ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಆಶಯದಂತೆ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಡಳಿತ ನಡೆಸಿದರು. ಸಮಾನತೆ ಹಾಗೂ ಎಲ್ಲರಿಗೂ ಅವಕಾಶ ಕಲ್ಪಿಸುವುದು ಬಸವಣ್ಣನವರ ಆಶಯವಾಗಿತ್ತು. ಅದರಂತೆ ನಾಲ್ವಡಿಯವರು ಒಳ್ಳೆಯ ಆಡಳಿತ ನೀಡಿದರು ಎಂದು ಸ್ಮರಿಸಿದರು.
ಬಸವಣ್ಣನವರ ವಚನಗಳು ಸರಳವಾಗಿದ್ದು, ಇವತ್ತಿನ ದಿನಮಾನಗಳಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಯ ಮಕ್ಕಳನ್ನು ಗುರುತಿಸಿ, ಕನ್ನಡಾಂಬೆ ರಕ್ಷಣಾ ವೇದಿಕೆ ಪುರಸ್ಕರಿಸುತ್ತಿರುವುದು, ಪೌರ ಕಾರ್ಮಿಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅರ್ಜುನ ಅವಧೂತ ಗುರೂಜಿ ಮಾತನಾಡಿ, ಕನ್ನಡ ಎಂದರೇ ವಿಶಾಲತೆ, ವಾತ್ಸಲ್ಯ, ತಾಯ್ತನ. ನಾವೆಲ್ಲರೂ ಕನ್ನಡಾಂಬೆಯ ಮಕ್ಕಳು. ಎಲ್ಲರೂ ಸೇರಿ ಕನ್ನಡವನ್ನು ಬೆಳೆಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಕೃತಿ ಚಿಂತಕ ಶಂಕರ ದೇವನೂರು ಮಾತನಾಡಿ, ಕನ್ನಡ ಎಂಬುದು ಅರಿವಿನ ಜ್ಯೋತಿ, ಬಸವಣ್ಣನವರದು ಮಾನವೀಯತೆ ಚಿಂತನೆಯಾಗಿತ್ತು. ನಾಲ್ವಡಿಯವರು ಶಿಕ್ಷಣಕ್ಕೆ ಒತ್ತು ನೀಡಿದರು ಎಂದು ಹೇಳಿದರು.
ಕನ್ನಡಾಂಬೆ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ.ಬಿ. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದಲ್ಲಿ 413 ಪೌರ ಕಾರ್ಮಿಕರಿಗೆ ಬಟ್ಟೆ, 130 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಡಾ.ಪಿ. ಶಿವರಾಜು, ಸಾಹಿತಿ ಡಾ.ಎಸ್. ಶಿವರಾಜಪ್ಪ ಮಾತನಾಡಿದರು. ಬಿಜೆಪಿ ಮುಖಂಡ ಕವೀಶ್‌ಗೌಡ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವೇದಿಕೆಯ ಪದಾಧಿಕಾರಿಗಳಾದ ನಂಜುಂಡ, ಶಿವಕುಮಾರ್, ತಾರಾ, ಹರೀಶ್, ಅಜಯ್ ಶೆಟ್ಟಿ, ವತ್ಸಲಾ, ಹರೀಶ್, ಗೀತಾ, ಕಿರಣ್ ಇತರರು ಇದ್ದರು.