ಮಾನಸಗಂಗೋತ್ರಿಯ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದಲ್ಲಿ ಬುಧವಾರ ಆಯೋ ಜಿಸಿದ್ದ ಉಪನ್ಯಾಸದಲ್ಲಿ ಶ್ರೀ ಬಸವಣ್ಣ ಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಪ್ರೊ. ಚಂದ್ರಶೇಖರಯ್ಯ, ಪ್ರೊ.ಎಂ. ನಂಜಯ್ಯ ಹೊಂಗನೂರು, ಪ್ರೊ.ಕೇಶವನ್ ಪ್ರಸಾದ್ ಕೆ. ಮರಟ್ಟಿ, ಡಾ.ಎನ್. ಮಧುಸೂದನ್ ಇದ್ದರು.
ಜಗಜ್ಯೋತಿ ಬಸವಣ್ಣ ಕೇವಲ ಸಮಾಜ ಸುಧಾರಕ ಮಾತ್ರವಲ್ಲ ನವ ಸಮಾಜದ ನಿರ್ಮಾತೃ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರಯ್ಯ ಬಣ್ಣಿಸಿದರು.
ಮೈಸೂರು ವಿಶ್ವವಿದ್ಯಾಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಕೇಂದ್ರದ ಸಭಾಂಗಣದಲ್ಲಿ ಬುಧವಾರ ‘ಭಾರತದ ಪ್ರಥಮ ಸಮಾಜ ಶಾಸ್ತ್ರಜ್ಞ : ಬಸವಣ್ಣ’ ವಿಷಯದ ಕುರಿತು ಉಪನ್ಯಾಸ ನೀಡಿ, ಬಸವಣ್ಣ ಅವರ ಕಾಲಘಟ್ಟದಲ್ಲಿ ಈಗಿನಂತೆ ಸಮಾಜ ಇರಲಿಲ್ಲ, ಸಮಾಜ ಎಂದರೆ ಜಾತಿಯ ಸಮಾಜವಾಗಿತ್ತು. ಹಾಗಾಗಿ ಬಸವಣ್ಣ ಜಾತಿಯ ಹೊರತಾಗಿ ನವ ಸಮಾಜ ನಿರ್ಮಾಣ ಮಾಡಿದರು ಎಂದರು.
ಬಸವಣ್ಣ ಸಮಾನತೆಯ ಆಧಾರದ ಮೇಲೆ ಸಮಾಜ ನಿರ್ಮಾಣ ಮಾಡಿದರು. ಅವರು ನಿರ್ಮಾಣ ಮಾಡಿದ ಸಮಾಜದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸ್ವಾತಂತ್ರೃ ಇತ್ತು. ಬಸವಣ್ಣ ಅವರ ಮಾದರಿಯಲ್ಲಿ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೇಶವನ್ ಪ್ರಸಾದ್ ಕೆ. ಮರಟ್ಟಿ, ತಿ.ನರಸೀಪುರ ತಾಲೂಕಿನ ಕಯ್ಯಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎನ್. ಮಧುಸೂದನ್ ಇದ್ದರು.