ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಿರ್ಮಿಸಲುದ್ದೇಶಿಸಿರುವ ಮೇಲ್ಸೇತುವೆ ನಿರ್ಮಾಣದ ಪ್ರದೇಶಕ್ಕೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಮೇಶ್, ಶಂಕರೇಗೌಡ ಇದ್ದರು. 
ಮೈಸೂರು

ಮೇಲ್ಸೇತುವೆ ನಿರ್ಮಾಣದ ಸ್ಥಳಕ್ಕೆ ಅರಣ್ಯ ಸಚಿವರ ಭೇಟಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • 347 ಮರಗಳ ತೆರವು ಬಗ್ಗೆ ಅರಣ್ಯಾಧಿಕಾರಿಗಳಿಂದ ಮಾಹಿತಿ
ಸಿದ್ದಿಕಿನಗರ ಹಾಗೂ ಮಣಿಪಾಲ್ ಆಸ್ಪತ್ರೆ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ನಿರ್ಮಾಣದ ಪ್ರದೇಶಕ್ಕೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಬನ್ನಿಮಂಟಪ ರಸ್ತೆ, ನಂಜನಗೂಡು ರಸ್ತೆ, ಫೌಂಟನ್ ರಸ್ತೆ ಹಾಗೂ ಹುಣಸೂರು ರಸ್ತೆಗಳ ವಿಭಜಕಗಳೊಳಗೆ ಬೆಳೆಸಿರುವ ಮರಗಳು ಅಡ್ಡಿಯಾಗುವ ಸಾಧ್ಯತೆ ಇರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾಮಗಾರಿಗೆ ಎಡ ಮತ್ತು ಬಲ ಬದಿಯ ಮರಗಳನ್ನು ಸೇರಿಸಿ ಒಟ್ಟು 347 ಮರಗಳನ್ನು ತೆರವುಗೊಳಿಸಬೇಕಾಗಬಹುದು ಎಂದು ಅರಣ್ಯಾಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಈ ವೇಳೆ ಬೀಟೆ, ರೈನ್ ಟ್ರೀ, ಹೊಂಗೆ, ಆಕಾಶ ಮಲ್ಲಿಗೆ, ಗಸಗಸೆ, ಮಹಾಗನಿ, ಮಾವು ಹಾಗೂ ಬೇವು ಸೇರಿದಂತೆ ವಿವಿಧ ಜಾತಿಯ ಮರಗಳು ಕಾಮಗಾರಿಯಿಂದ ಹಾನಿಗೆ ಸಿಲುಕಲಿವೆ. ಹೀಗಾಗಿ ಸಾಧ್ಯವಾದಷ್ಟು ಮರಗಳನ್ನು ಉಳಿಸಲು ಕ್ರಮಕೈಗೊಳ್ಳಬೇಕು. ಬೀಟೆ ಸೇರಿದಂತೆ ದೊಡ್ಡ ಮರಗಳ ಸ್ಥಳಾಂತರಕ್ಕೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಸೇರಿದಂತೆ ಅರಣ್ಯ ಇಲಾಖೆ ಇತರೆ ಅಧಿಕಾರಿಗಳು ಇದ್ದರು.