ಕೂಡ್ಲೂರು-ಹೊಸಕೋಟೆಯಲ್ಲಿ ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವುದು.
ಹನಗೋಡು: ಹೋಬಳಿಯ ಕೂಡ್ಲೂರು-ಹೊಸಕೋಟೆ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಭಾನುವಾರ ಮಧ್ಯಾಹ್ನ ದುಬಾರೆ ಆನೆ ಶಿಬಿರದಿಂದ ಅಜೇಯ ಮತ್ತು ಇಂದ್ರ ಎಂಬ ಸಾಕಾನೆಗಳನ್ನು ಕರೆತಂದು ಹುಲಿ ಇರುವ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಆದರೆ ಹುಲಿ ಪತ್ತೆಯಾಗಿಲ್ಲ.
ಡ್ರೋನ್ ಕಣ್ಗಾವಲು: ಹುಲಿ ಸೆರೆ ಕಾರ್ಯಾಚರಣೆಗಾಗಿ ಕಳೆದ ಎರಡು ದಿನಗಳಿಂದ 25ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ನಿಯೋಜಿಸಲಾಗಿದ್ದು, ಡ್ರೋನ್ ಕ್ಯಾಮರಾ ಮೂಲಕವೂ ನಿರಂತರವಾಗಿ ಕಣ್ಗಾವಲಿಡಲಾಗಿದೆ. ಶುಕ್ರವಾರ ರಾತ್ರಿ ಡ್ರೋನ್ ಕ್ಯಾಮರಾದಲ್ಲಿ ಸುಮಾರು ನಾಲ್ಕು ವರ್ಷದ ಹುಲಿ ಕಾಣಿಸಿಕೊಂಡಿತ್ತು.
ಕಳೆದ ಎರಡು ದಿನಗಳಿಂದ ಗ್ರಾಮಸ್ಥರು ಹಾಗೂ ರೈತರ ಕೂಗಾಟ, ಓಡಾಟದಿಂದ ಹುಲಿ ಸ್ಥಳ ಬದಲಾಯಿಸಿರುವ ಸಾಧ್ಯತೆ ಇದೆ. ಹೀಗಾಗಿ ಹುಲಿ ಸದ್ಯಕ್ಕೆ ಕಾಣಿಸಿಕೊಳ್ಳದಿದ್ದರೂ, ಡ್ರೋನ್ ಮೂಲಕ ಅದರ ಚಲನವಲನ ಪತ್ತೆಹಚ್ಚಲು ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಎಸಿಎಫ್ ಕಿರಣ್ ಕುಮಾರ್ ಹಾಗೂ ಪಶುವೈದ್ಯಾಧಿಕಾರಿ ಡಾ. ರಮೇಶ್ ತಿಳಿಸಿದ್ದಾರೆ.
ರೈತರ ಮನವೊಲಿಕೆ: ಹುಲಿ ದಾಳಿಗೆ ಜಾನುವಾರುಗಳನ್ನು ಕಳೆದುಕೊಂಡು ಆಕ್ರೋಶಗೊಂಡಿದ್ದ ರೈತರನ್ನು ಮನವೊಲಿಸುವ ಸಲುವಾಗಿ ಹುಣಸೂರು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಹುಲಿ ಸೆರೆಹಿಡಿಯಲು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಕೋರಿದ್ದನ್ನು ಸ್ಮರಿಸಬಹುದು.