ಪಿರಿಯಾಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ವಿವಿಧ ಘಟಕಗಳಿಗೆ ನೇಮಕಗೊಂಡವರಿಗೆ ಆದೇಶ ಪತ್ರ ನೀಡಲಾಯಿತು. ಮಾಜಿ ಶಾಸಕ ಕೆ.ಮಹದೇವ್, ಅಣ್ಣಯ್ಯ ಶೆಟ್ಟಿ, ಜೆ.ಎಸ್.ನಾಗರಾಜ್, ಗಗನ್, ಸುನಿತಾ ಮಂಜುನಾಥ್, ರೇಣುಕ ಸ್ವಾಮಿ, ಎಚ್.ಡಿ.ರಾಜೇಂದ್ರ ಇದ್ದರು.
ಪಿರಿಯಾಪಟ್ಟಣ: ಬೂತ್‌ಮಟ್ಟದ ಕಾರ್ಯಕರ್ತರು ಶ್ರಮವಹಿಸಿದಾಗ ಮಾತ್ರ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆ (ಬಿಎಲ್‌ಒ-2 ಕಾರ್ಯಾಗಾರ) ಮತ್ತು ನೇಮಕಾತಿ ಆದೇಶ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷದವರು ವೋಟ್ ಚೋರಿ ರಾಜಕಾರಣದಲ್ಲಿ ನಿಸ್ಸೀಮರು. ಆದ್ದರಿಂದ ಪ್ರತಿಯೊಬ್ಬ ಬೂತ್ ಕಮಿಟಿ ಸದಸ್ಯರು ಮತಚೋರಿಯಾಗದಂತೆ ಗಮನ ಹರಿಸಬೇಕು. ಅಕ್ರಮ ಮತದಾರರನ್ನು ಪತ್ತೆ ಹಚ್ಚಿ ಮತಪಟ್ಟಿಯಿಂದ ತೆಗೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಹಿಂದಿನಂತೆ ಎರಡನೇ ಹಂತದ ನಾಯಕರನ್ನು ಕಡೆಗಣಿಸಿ ಅಭಿವೃದ್ಧಿ ಕೆಲಸ ಮಾಡುವುದಿಲ್ಲ. ಮುಖಂಡರ ಮೂಲಕವೇ ಅಭಿವೃದ್ಧಿ ಮಾಡುತ್ತೇನೆ, ಹಿಂದಿನ ತಪ್ಪು ಮಾಡುವುದಿಲ್ಲ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಪ್ರತಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಲ್ಲದೆ, ತಾಲೂಕಿನ ಜನತೆ ಕುಡಿಯುವ ನೀರಿನಿಂದ ಯಾವುದೇ ರೋಗ ಭಾದೆಗೆ ತುತ್ತಾಗಬಾರದು ಎಂದು 260 ಕೋಟಿ ರೂ.ವೆಚ್ಚದಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆ ತಂದಿದ್ದೀನಿ. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಪಾಳೆಗಾರಿಕೆ ಆಡಳಿತದ ವಿರುದ್ಧ ಹೋರಾಡಿ ಜೆಡಿಎಸ್ ಕಾರ್ಯಕರ್ತರ ಹಿತ ಕಾಯುವ ಕೆಲಸ ಮಾಡಿದ್ದೇನೆ. ನಮ್ಮ ಕಾರ್ಯಕರ್ತರು ಬಣ ರಾಜಕೀಯ ಬಿಟ್ಟು ತಾಲೂಕಿನಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಒಂದಾಗಬೇಕು ಎಂದರು.
ತಾಲೂಕಿನ ಮುಂಬರುವ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡುವ ಬೂತ್‌ಗಳ ಸದಸ್ಯರಿಗೆ ಫಾರಿನ್ ಟೂರ್ ಕಳುಹಿಸುವುದಾಗಿ ಮಾಜಿ ಶಾಸಕ ಕೆ.ಮಹದೇವ್ ಘೋಷಿಸಿದರು.
ಜೆಡಿಎಸ್ ಕಾನೂನು ಘಟಕದ ತಾಲೂಕು ಅಧ್ಯಕ್ಷ ವಕೀಲ ಜೆ.ಎಸ್.ನಾಗರಾಜ್ ಮಾತನಾಡಿ, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದರಷ್ಟೇ ಚುನಾವಣೆಯಲ್ಲಿ ಗೆಲುವು ಸಾಧ್ಯ. ಪ್ರತಿಯೊಬ್ಬರೂ ಬೂತ್ ಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ಪಕ್ಷ ಬಲಿಷ್ಠವಾಗುತ್ತದೆ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಮಾತನಾಡಿ, ಜೆಡಿಎಸ್ ಕಾರ್ಯಕರ್ತರ ಪಕ್ಷ. ಇಲ್ಲಿ ನಿಷ್ಠಾವಂತ ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ ಮತ್ತು ಸಂಜೀವಿನಿ. ವೈಮನಸ್ಸು, ಮುನಿಸು ತೊರೆದು ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಸಲಹೆ ನೀಡಿದರು.
ವಿವಿಧ ಘಟಕಗಳಿಗೆ ನೇಮಕಗೊಂಡ ಕಾರ್ಯಕರ್ತರಿಗೆ ನೇಮಕಾತಿ ಪತ್ರ ನೀಡಲಾಯಿತು. ತಾಲೂಕು ಕಾರ್ಯಾಧ್ಯಕ್ಷ ಗಗನ್, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಮಂಜುನಾಥ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ್, ಕಾರ್ಯಕಾರಿಣಿ ಕಾರ್ಯದರ್ಶಿ ದಿನೇಶ್, ನಗರ ಘಟಕದ ಕಾರ್ಯದರ್ಶಿ ರಮೇಶ್, ಯುವ ಘಟಕದ ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಸಂಜೀವ್, ತಾಲೂಕು ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುಮಾರ್, ರೇಣುಕ ಸ್ವಾಮಿ, ಎಚ್.ಡಿ.ರಾಜೇಂದ್ರ, ಅತ್ತರ್ ಮತೀನ್, ಜೆ.ಎನ್.ನಾಗರಾಜ್, ಮಂಜುನಾಥ್, ಆವರ್ತಿ ಸೋಮಶೇಖರ್, ಕೆ.ರಮೇಶ್, ಸುಂದರೇಗೌಡ, ಕಿರನಲ್ಲಿ ರಾಜೇಗೌಡ, ಮುತ್ತುರಾಜ್ ಹಾಜರಿದ್ದರು.