recruitment 
ಮೈಸೂರು

ತ್ವರಿತ ನೇಮಕಾತಿ ನಡೆಸಲು ಒತ್ತಾಯ

ಅವಿನಾಶ್ ಜೈನಹಳ್ಳಿ
ಒಳಮೀಸಲಾತಿ ರೊಸ್ಟರ್ ಹಂಚಿಕೆ ವಿರೋಧಿಸಿ, ಹಳೆ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿ ನಡೆಸಲು ಒತ್ತಾಯಿಸಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ವತಿಯಿಂದ ಮಾರ್ಚ್ 24 ರಂದು ಬೆಂಗಳೂರು ಚಲೋ ಚಳವಳಿ ಹಮ್ಮಿಕೊಂಡಿದ್ದು, ಮೈಸೂರು ಭಾಗದಿಂದ ಸುಮಾರು 15 ಸಾವಿರ ಮಂದಿ ಅದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧ್ಯಕ್ಷ ಎಸ್.ವಿಜಯಕುಮಾರ್ ತಿಳಿಸಿದರು.
ಬೆಂಗಳೂರು ಚಲೋ ಅಂಗವಾಗಿ ಅಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಇದರಲ್ಲಿ ಸುಮಾರು 2 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ್ಯಾ.ನಾಗಮೋಹನ ದಾಸ್ ವರದಿ ಪ್ರಕಾರ ನಾವು ಯಾವುದೇ ಕಾರಣಕ್ಕೂ ಎ ಭಾಗಕ್ಕೆ ಬರುವುದಿಲ್ಲ. ಎ ವರ್ಗಕ್ಕೆ ಸೇರಿಸಬೇಕಾದ ತಮ್ಮ ಸಮುದಾಯವನ್ನು ಅಪೂರ್ಣ ಸಮೀಕ್ಷೆ ಕಾರಣ ಸಿ ವರ್ಗಕ್ಕೆ ಸೇರಿಸಿ ಅನ್ಯಾಯ ಎಸಗಲಾಗಿದೆ. ಆದ್ದರಿಂದ ಹಳೆ ಮೀಸಲಾತಿ ನಿಯಮ ಶೇ.50ರ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಮುಂದುವರಿಸುವುದಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಪ್ರಕಟಣೆ ಸ್ವಾಗತಾರ್ಹ ಎಂದರು.
ಈಚೆಗೆ ರಾಜ್ಯ ಸರ್ಕಾರದ ವಿವಿಧ ವಿವಿಗಳ ಪ್ರಾಧಿಕಾರ ಮತ್ತು ಕೆಲ ಇಲಾಖೆಗಳ ನೇಮಕಾತಿ ಅಧಿಸೂಚನೆಯಲ್ಲಿ ಪ್ರವರ್ಗ ಬಿ ಮತ್ತು ಸಿ ಗುಂಪಿಗೆ ಶೂನ್ಯ ಹುದ್ದೆ ಸೃಷ್ಟಿಸಲಾಗಿದೆ. ಒಳ ಮೀಸಲಾತಿ ಎಷ್ಟೊಂದು ಅವೈಜ್ಞಾನಿಕ ಮತ್ತು ಅನ್ಯಾಯದ್ದಾಗಿದೆ ಎಂಬುದು ಈ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಮುಖಂಡರಾದ ಎಚ್.ಕೆ. ದೇವರಾಜು, ಟಿ. ಕೃಷ್ಣ, ಎಸ್.ಪರಮೇಶ್, ಪಿ.ಬಸವರಾಜು, ಜಿ. ನಾಗರಾಜು, ಪಿ.ಮಲ್ಲಯ್ಯ, ಎಚ್. ದಾಸ್, ಸಿ. ರಾಮಸ್ವಾಮಿ, ರಾಮಲಿಂಗು ಇದ್ದರು.