ಎಚ್.ಡಿ.ಕೋಟೆ ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕಿ ಕೆ.ಸಿ. ಶ್ವೇತಾ ಅರವರನ್ನು ಅಭಿನಂದಿಸಲಾಯಿತು. ಕಿರಣ್ ಸಿಡ್ಲೇಹಳ್ಳಿ, ಜೆ.ಎನ್.ವೆಂಕಟೇಶ್, ಕನ್ನಡ ಪ್ರಮೋದ್, ಗಿರೀಶ್‌ಮೂರ್ತಿ ಇದ್ದರು. 
ಮೈಸೂರು

ವಿಶ್ವ ಸಾಹಿತ್ಯದಲ್ಲಿ ಜಾನಪದಕ್ಕೆ ಮೊದಲ ಸ್ಥಾನ

ಲೋಕೇಶ್ ಮನು. ಡಿ
ಎಚ್.ಡಿ. ಕೋಟೆ: ಜಾನಪದ ಸಾಹಿತ್ಯವು ವಿಶ್ವ ಸಾಹಿತ್ಯದಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಸಾಹಿತಿ ಕಿರಣ್ ಸಿಡ್ಲೇಹಳ್ಳಿ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಮತ್ತು ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಎಂ. ನಂಜುಂಡಾರಾಧ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಸಾಹಿತ್ಯದ ಪಾಶ್ಚಿಮಾತ್ಯ ಸಾಹಿತ್ಯಕ್ಕೂ ಭಾರತದ ಜಾನಪದ ಸಾಹಿತ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದೆಲ್ಲ ಧರ್ಮ ಎದ್ದು ನಿಂತಾಗ ರಾಕ್ಷಸರು ಇದ್ದೇ ಇರುತ್ತಿದ್ದರು. ಎಷ್ಟೇ ರಾಕ್ಷಸರು ಇದ್ದರೂ ಧರ್ಮಕ್ಕೆ ಜಯ ಸಿಗುತ್ತಿತ್ತು. ಆ ಪ್ರವೃತ್ತಿ ಹಿಂದೆಯೂ ನಡೆದಿದೆ, ಇಂದು ನಡೆಯುತ್ತಿದೆ, ಮುಂದೆಯೂ ನಡೆಯುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಭಾಸ್ಕರ್ ಮಾತನಾಡಿ, ಶಾಲಾ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿ ಉತ್ತೀರ್ಣರಾಗುವುದು ಎಷ್ಟು ಮುಖ್ಯವೋ ಅದೇ ರೀತಿ ಜೀವನದಲ್ಲೂ ಸಹ ಉತ್ತಮರಾಗಿ ಗುರುತಿಸಿಕೊಂಡು ಉತ್ತೀರ್ಣರಾಗುವುದು ಕಬ್ಬಿಣದ ಕಡಲೆ ಇದ್ದಂತೆ. ಜೀವನದಲ್ಲಿ ಉತ್ತೀರ್ಣರಾದವರು ಸುಖೀ ಜೀವನ ನಡೆಸುತ್ತಿದ್ದಾರೆ ಎಂದರು.
ಇಂದಿನ ವಿದ್ಯಾರ್ಥಿ ಸಮೂಹ ಮೊಬೈಲ್ ಗೀಳಿಗೆ ದಾಸರಾಗಿ ಸತ್ಯ ಯಾವುದು ಸುಳ್ಳು ಯಾವುದು ಎಂದು ಅರಿಯುವ ಗೋಜಿಗೆ ಹೋಗದಿರುವುದು ಬೇಸರದ ಸಂಗತಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್ ಮಾತನಾಡಿದರು.
ಹೊಸತೊರವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ನವೋದಯಕ್ಕೆ ಆಯ್ಕೆಯಾಗಲು ತರಬೇತಿ ನೀಡಿದ ಶಿಕ್ಷಕಿ ಕೆ.ಸಿ.ಶ್ವೇತಾ ಅರವರನ್ನು ಅಭಿನಂದಿಸಲಾಯಿತು.
ಪ್ರಾಂಶುಪಾಲ ಜೆ.ಎನ್.ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್, ಬಿಆರ್‌ಟಿ ಗಿರೀಶ್‌ಮೂರ್ತಿ, ಸ್ವಾಮಿ ಮಾಸ್ಟರ್, ಗಾಯಕ ಸಿದ್ದರಾಜು, ಉಪನ್ಯಾಸಕರಾದ ಚನ್ನಕೇಶವ, ಸಿದ್ದೇಗೌಡ, ಚಂದನ, ಮಹದೇವು ಇದ್ದರು.