ಶ್ರೀರಂಗದಲ್ಲಿ ಆಯೋಜಿಸಿದ್ದ ನೃತ್ಯ ತರಬೇತಿ ಶಿಬಿರವನ್ನು ರಂಗಾಯಣದ ನಿವೃತ್ತ ನಿರ್ದೇಶಕ ಮ.ಗು.ಸದಾನಂದಯ್ಯ ಉದ್ಘಾಟಿಸಿದರು. ಕ್ಯಾತನಹಳ್ಳಿ ಪ್ರಕಾಶ್, ಡಾ.ಕಾವೇರಿ ಪ್ರಕಾಶ್, ಡಾ.ಬಿ.ಸುಜಾತಾ, ಕೃಷ್ಣ ಜನಮನ ಇದ್ದರು.
- ಜಾನಪದ ಕಲೆ ಜೀವನ ಕ್ರಮ. ಅದು ಲೌಕಿಕ ಬದುಕನ್ನು ಗಟ್ಟಿಗೊಳಿಸುವ ಕೆಲಸ
- ಕಲೆ, ಕ್ರೀಡೆ, ಜಾನಪದ, ಪ್ರಕೃತಿ ಸೇರಿದಂತೆ ಎಲ್ಲವೂ ಸಮೃದ್ಧ
ಮೈಸೂರು: ಜಾನಪದ ಪ್ರದರ್ಶಕ ಕಲೆಗಳಲ್ಲಿ ವಿವಿಧ ಕ್ಷೇತ್ರದವರು ಸಹ ಸಕ್ರಿಯವಾಗುವ ಮೂಲಕ ಬದುಕನ್ನು ಸುಂದರವಾಗಿಸಿಕೊಳ್ಳಬೇಕು. ಇಲ್ಲವಾದರೆ ಜಡತ್ವ ಆವರಿಸಿಕೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಮ.ಗು.ಸದಾನಂದಯ್ಯ ಹೇಳಿದರು.
ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಂಗಾಯಣದ ಶ್ರೀರಂಗದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ನೃತ್ಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲೆ ಜೀವನ ಕ್ರಮ. ಅದು ಲೌಕಿಕ ಬದುಕನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ. ಜನರು, ಸಮಾಜವನ್ನೂ ಒಂದುಗೂಡಿಸುತ್ತದೆ. ಹೀಗಾಗಿ, ಜಾನಪದ, ಸಾಹಿತ್ಯ, ರಂಗ ಕಲೆಯತ್ತ ಒಲವು ಬೆಳೆಸಿಕೊಳ್ಳಬೇಕು ಎಂದರು.
ಈಗಿನ ತಲೆಮಾರು ಎಲ್ಲವನ್ನೂ ಅಲಕ್ಷಿಸುತ್ತಿದೆ. ಕೆಲಸವೂ ಯಾಂತ್ರಿಕೃತವಾಗಿದೆ. ಎಲ್ಲದರಲ್ಲೂ ಲಾಭ ನಿರೀಕ್ಷಿಸಲಾಗುತ್ತಿದೆ. ಹಿರಿಯರಲ್ಲಿರುವ ಆಸಕ್ತಿ ಯುವ ಪೀಳಿಗೆಯಲ್ಲಿ ಕಾಣುತ್ತಿಲ್ಲ. ಪ್ರಶ್ನಿಸುವ ಅಂಶವೇ ತಪ್ಪು ಎಂದು ಭಾವಿಸಿ ಬದುಕುತ್ತಿದ್ದಾರೆ.
ಕಲೆ, ಕ್ರೀಡೆ, ಜಾನಪದ, ಪ್ರಕೃತಿ ಸೇರಿದಂತೆ ಎಲ್ಲವೂ ಸಮೃದ್ಧವಾಗಿದ್ದರೂ ಏನೂ ಇಲ್ಲ ಎಂಬ ಮನಸ್ಥಿತಿ ಯುವ ಜನರಲ್ಲಿದೆ. ಕ್ರಿಯಾಶೀಲವಾಗದಿದ್ದರೆ ಜಡತ್ವದ ಚೌಕಟ್ಟಿನಲ್ಲಿ ಸಿಲುಕಿಕೊಂಡು ಇದ್ದರೂ ಇಲ್ಲದಂತಾಗಬೇಕಾಗುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳದಿದ್ದರೆ ನಿಧಾನವಾಗಿ ಮಾನಸಿಕವಾಗಿ ಸಾಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಾನಪದ ರಂಗದಲ್ಲಿ ದುಡಿಯುವವರ ಕಡೆಗೆ ಕಣ್ಣೆತ್ತಿಯೂ ನೋಡದ ಸ್ಥಿತಿ ನಿರ್ಮಾಣವಾಗಿದೆ. ಮೂಲ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೂ ಸರ್ಕಾರ ಮುಂದಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಜಾನಪದವು ಈ ನೆಲದ ಮೂಲ ಸಂಸ್ಕೃತಿ. ಎಲ್ಲ ಶಾಸ್ತ್ರೀಯ ಕಲೆಗಳ ತಾಯಿಬೇರು. ಇದರ ಬುನಾದಿ ಮೇಲೆ ಇತರ ಕಲೆಗಳು ಬೆಳೆದಿವೆ. ಈ ಕಲೆಗೆ ಸಾವಿಲ್ಲ. ಎಲೆಮರೆಯ ಕಾಯಿಗಳಂತೆ ಅನೇಕ ಕಲಾವಿದರು, ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದು, ವಿದ್ಯಾರ್ಥಿಗಳನ್ನೂ ಈ ಕಲೆಯಲ್ಲಿ ತೊಡಗಿಸುವ ಕೆಲಸವಾಗಬೇಕಿದೆ ಎಂದರು.
ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ಕಾವೇರಿ ಪ್ರಕಾಶ್, ಪ್ರಾಧ್ಯಾಪಕಿ ಡಾ.ಬಿ.ಸುಜಾತಾ, ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜನಮನ ಇದ್ದರು.