ಸಖಿ ಫೌಂಡೇಷನ್ ಹಾಗೂ ಸೂರ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜೈಹಿಂದ್ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್.ವಿ.ರಾಜೀವ್, ರವೀಂದ್ರ, ಡಾ.ಬಿ.ಆರ್.ನಟರಾಜ್ ಜೋಯಿಸ್, ಎಚ್.ಆರ್.ಸುಂದರೇಶನ್, ಗಾಯತ್ರಿ ಸುಂದರೇಶ್ ಇದ್ದರು. 
ಮೈಸೂರು

ವಿಭಿನ್ನ ಕ್ಷೇತ್ರಗಳತ್ತ ಗಮನಹರಿಸಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸಲಹೆ

ಯಾವುದೇ ಕೆಲಸವನ್ನು ಒಬ್ಬರು ಮಾಡುವುದಕ್ಕಿಂತ ಒಗ್ಗಟ್ಟಾಗಿ ಕೈಜೋಡಿಸಿ ಮಾಡಿದಾಗ ಯಶಸ್ಸಿನ ಶಿಖರವೇರಲು ಸಾಧ್ಯ. ಸಂಘಟನೆಯ ಮೂಲಕ ಎಂತಹ ಕೆಲಸವನ್ನಾದರೂ ಸಾಧಿಸಬಹುದು ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.

ಸಖಿ ಫೌಂಡೇಷನ್ ಹಾಗೂ ಸೂರ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಮಕೃಷ್ಣನಗರದಲ್ಲಿ ಭಾನುವಾರ ಆಯೋಜಿಸಿದ್ದ ಜೈಹಿಂದ್ ಹಾಗೂ ದಿವಂಗತ ಸಾವಿತ್ರಿ ರಘುನಾಥ್ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ದೇಶದಲ್ಲಿ ಸಂಘಟನೆಯ ಮೂಲಕ ನಡೆದಿರುವ ಹಲವು ಸಾಧನೆಗಳು ನಮ್ಮ ಕಣ್ಣ ಮುಂದಿವೆ. ಮಹಿಳೆಯರು ಭಕ್ತಿಗೀತೆ, ಭಾವಗೀತೆಗಳಿಗೆ ಮಾತ್ರ ಸೀಮಿತರಾಗದೆ ದೇಶಭಕ್ತಿಗೀತೆಗಳನ್ನು ಹಾಡಲು ಒಗ್ಗೂಡಿರುವುದು ಹೆಮ್ಮೆಯ ಸಂಗತಿ ಎಂದರು.
ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣದತ್ತ ಮಾತ್ರ ಗಮನ ಹರಿಸದೆ ಸೇನೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ಅವಕಾಶಗಳನ್ನು ಹುಡುಕಬೇಕು. ಸರ್ಕಾರಿ ಉದ್ಯೋಗವನ್ನೇ ಅವಲಂಬಿಸದೆ ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಿವೃತ್ತ ಕರ್ನಲ್ ರವೀಂದ್ರ ಮಾತನಾಡಿ, ವಂದೇ ಮಾತರಂ ಗೀತೆಯನ್ನು ಎಷ್ಟು ಬಾರಿ ಕೇಳಿದರೂ ಮೈ ರೋಮಾಂಚನಗೊಳ್ಳುತ್ತದೆ. ದೇಶಭಕ್ತಿ ಸಾರುವ ಗೀತೆಗಳು ಯುವಕರಲ್ಲಿ ದೇಶಪ್ರೇಮ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಕೆಲವು ವರ್ಷಗಳಾದರೂ ಸೇನೆಯಲ್ಲಿ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ 18ಕ್ಕೂ ಹೆಚ್ಚು ತಂಡಗಳು ದೇಶಭಕ್ತಿಗೀತೆಗಳನ್ನು ಹಾಡಿದವು. ಅಪರ್ಣಾ ಶರ್ಮಾ ಮತ್ತು ತಂಡ, ಸುರಭಿ ಗಾಯನ ಸಮಾಜ ಹಾಗೂ ಶ್ರುತಿ ಮಹಿಳಾ ಸಮಾಜ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು. ಬಾಲ ತ್ರಿಪುರಾಂಬಿಕಾ ಮತ್ತು ತಂಡಕ್ಕೆ ಉಡುಗೆ-ತೊಡುಗೆ ವಿಭಾಗದಲ್ಲಿ ವಿಶೇಷ ಬಹುಮಾನ ನೀಡಲಾಯಿತು.
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ರಾಮಕೃಷ್ಣನಗರದ ವಿದ್ಯಾರ್ಥಿಗಳಿಗೆ ದಿವಂಗತ ಸಾವಿತ್ರಿ ರಘುನಾಥ್ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜ ಸೇವಕ ಡಾ.ಬಿ.ಆರ್.ನಟರಾಜ್ ಜೋಯಿಸ್, ಸಂಸ್ಥೆಯ ಅಧ್ಯಕ್ಷ ಎಚ್.ಆರ್.ಸುಂದರೇಶನ್, ಗಾಯಿತ್ರಿ ಸುಂದರೇಶ್ ಉಪಸ್ಥಿತರಿದ್ದರು.