ಮೈಸೂರು: ನಗರದಲ್ಲಿ ಹೆಚ್ಚಾಗುತ್ತಿರುವ ವಾಹನಗಳ ದಟ್ಟಣೆ ತಡೆಯುವ ಉದ್ದೇಶದಿಂದ ಫ್ಲೈ ಓವರ್‌ನ ಅಗತ್ಯವಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.
ಜೆಎಲ್‌ಬಿ ರಸ್ತೆ ಹಾಗೂ ವಿನೋಬಾ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಯೋಜನೆಯಿಂದ ಪರಂಪರೆಗೆ ಧಕ್ಕೆ ಆಗುವುದಿಲ್ಲ. ಆದರೂ ಸಂಸದರು ವಿರೋಧ ವ್ಯಕ್ತಪಡಿಸುತ್ತಿರುವುದೇಕೆ ಎಂಬುದಕ್ಕೆ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು.
ಅಂಬಾವಿಲಾಸ ಅರಮನೆ, ಪಾರಂಪರಿಕ ಕಟ್ಟಡಗಳ ಮೇಲಾಗಲಿ ಅಥವಾ ಸಮೀಪದಲ್ಲಾಗಲಿ ಫ್ಲೈಓವರ್ ನಿರ್ಮಿಸುತ್ತಿಲ್ಲ. ಆದ್ದರಿಂದ ವಿರೋಧಿಸುವುದು ಅರ್ಥವಿಲ್ಲ. ಯಾವುದೇ ಕಾರಣಕ್ಕೂ ಫ್ಲೈಓವರ್ ಯೋಜನೆಯಿಂದ ಸರ್ಕಾರ ಹಿಂದೆ ಸರಿಯಬಾರದು. ಜನರು ನಮ್ಮೊಂದಿಗಿದ್ದಾರೆ. ಯಾರೋ ಕೆಲವರ ಆಕ್ಷೇಪಗಳಿಗೆ ಮುಖ್ಯಮಂತ್ರಿ ಮಣೆ ಹಾಕಬಾರದು ಎಂದು ಒತ್ತಾಯಿಸಿದರು.
ವಿನೋಬಾ ರಸ್ತೆಯಲ್ಲಿ ಮೆಟ್ರೋಪೋಲ್ ಹೋಟೆಲ್ ಬಳಿಯ ಜಂಕ್ಷನ್‌ನಿಂದ ಹಿನಕಲ್‌ವರೆಗೆ (12 ಕಿ.ಮೀ.) ಫ್ಲೈ ಓವರ್ ನಿರ್ಮಾಣವಾದರೆ ಬಹಳ ಅನುಕೂಲ ಆಗುತ್ತದೆ. ಮೆಟ್ರೋಪೋಲ್‌ನಿಂದ ಹಿನಕಲ್ ಜಂಕ್ಷನ್‌ವರೆಗೆ ಪ್ರಸ್ತುತ ದಿನಕ್ಕೆ ಸರಾಸರಿ 60 ಸಾವಿರ ವಾಹನಗಳು ಸಂಚರಿಸುತ್ತಿವೆ. ಇದು ಮುಂದಿನ 10 ವರ್ಷಗಳಲ್ಲಿ 1.90 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದರು.
ಹೀಗಾಗಿ ಪರ್ಯಾಯ ವ್ಯವಸ್ಥೆಗೆ ನಮ್ಮ ಸರ್ಕಾರ ಈಗಿನಿಂದಲೇ ಕ್ರಮ ಕೈಗೊಳ್ಳುತ್ತಿದೆ. ಈ ಮಾರ್ಗದಲ್ಲಿರುವ 12 ಸಿಗ್ನಲ್‌ಗಳನ್ನು ದಾಟಿ ಹಿನಕಲ್ ಜಂಕ್ಷನ್ ತಲುಪಲು 45 ನಿಮಿಷ ಬೇಕಾಗುತ್ತಿದೆ. ಫ್ಲೈಓವರ್ ನಿರ್ಮಾಣವಾದರೆ 5 ರಿಂದ 7 ನಿಮಿಷಗಳಲ್ಲಿ ಕ್ರಮಿಸಬಹುದು ಎಂದು ತಿಳಿಸಿದರು.
ಇದಕ್ಕಾಗಿ 15 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. 212 ಮರಗಳನ್ನು ಕತ್ತರಿಸಬೇಕಾಗುತ್ತದೆ. ಕೆಲವು ಬಸ್ ತಂಗುದಾಣ ಸೇರಿದಂತೆ 75 ಕಟ್ಟಡಗಳನ್ನು ತೆರವುಗೊಳಿಸಬೇಕಾಗುತ್ತದೆ. ಮೆಟ್ರೋ ರೈಲು ಸಂಚಾರಕ್ಕೂ ಅಗತ್ಯವಾದ ವ್ಯವಸ್ಥೆಯನ್ನು ಯೋಜನೆಯಲ್ಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ರಸ್ತೆಯಲ್ಲಿ ಕಳೆದ 3 ವರ್ಷಗಳಲ್ಲಿ 74 ಅಪಘಾತ ಸಂಭವಿಸಿದ್ದು 11 ಮಂದಿ ಸಾವಿಗೀಡಾಗಿದ್ದು, 73 ಮಂದಿ ಗಾಯಗೊಂಡಿದ್ದಾರೆ. ಸಾವು-ನೋವು ತಡೆಯಲು ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು ಅಗತ್ಯವಲ್ಲವೇ ಎಂದು ಪ್ರಶ್ನಿಸಿದರು.
ನಗರದಲ್ಲಿ 2 ಆರ್‌ಟಿಒಗಳಿದ್ದು, ಒಟ್ಟು 10.03 ಲಕ್ಷ ವಾಹನಗಳು ನೋಂದಣಿಯಾಗಿವೆ. ನಿತ್ಯವೂ ಬಂದು ಹೋಗುವ ವಾಹನಗಳು 2 ಲಕ್ಷ ಆಗುತ್ತವೆ. ಸುತ್ತಮುತ್ತಲ ಜಿಲ್ಲೆಗಳಲ್ಲಿ ನೋಂದಣಿಯಾಗಿ ಇಲ್ಲಿರುವಂತಹ 2.50 ಲಕ್ಷ ವಾಹನಗಳಿವೆ. ಒಟ್ಟು 15 ಲಕ್ಷಕ್ಕೂ ಜಾಸ್ತಿ ವಾಹನಗಳು ನಗರದಲ್ಲಿವೆ ಎಂದರು.
ಇಲ್ಲಿನ ಜನಸಂಖ್ಯೆ ಅಂದಾಜು 12 ಲಕ್ಷ ಇದೆ. ಹೀಗಾಗಿ ವಾಹನ ದಟ್ಟಣೆ ತಡೆಯಲು ಫ್ಲೈಓವರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮೊದಲ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನ ನೀಡಿ ಶಾಶ್ವತ ಕಾಮಗಾರಿ ಉಳಿಯುವಂತೆ ಮಾಡಿದರು. ಈಗ ಟ್ರಾಫಿಕ್ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಮೂಲಕ ನಗರದಲ್ಲಿ ಎರಡು ಫ್ಲೈಓವರ್ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದರು.
ಜೆಎಲ್‌ಬಿ ರಸ್ತೆಯ ದಾಸಪ್ಪ ವೃತ್ತದಿಂದ ಮೆಟ್ರೋಪೋಲ್ ವೃತ್ತ, ಅಲ್ಲಿಂದ ದೇವರಾಜ ಅರಸು ರಸ್ತೆ ಜಂಕ್ಷನ್‌ವರೆಗೆ, ಜಾವಗಲ್ ಶ್ರೀನಾಥ್ ಜಂಕ್ಷನ್‌ನಿಂದ ರಾಮಸ್ವಾಮಿ ವೃತ್ತದವರೆಗೆ ಹಾಗೂ ಅಲ್ಲಿಂದ ಆರ್‌ಟಿಒ ಜಂಕ್ಷನ್‌ವರೆಗೆ ಅಂಡರ್‌ಪಾಸ್ ಹಾಗೂ ಅಲ್ಲಿಂದ ಜೆಎಸ್‌ಎಸ್ ಆಸ್ಪತ್ರೆಯ ಜಂಕ್ಷನ್‌ವರೆಗೆ ಫ್ಲೈಓವರ್ ನಿರ್ಮಾಣಕ್ಕೆ ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಇದಕ್ಕಾಗಿ 192 ಮರಗಳನ್ನು ಕತ್ತರಿಸಬೇಕಾಗುತ್ತದೆ. 13.56 ಎಕರೆ ಭೂಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಇಲ್ಲಿ ನಿತ್ಯ ಸರಾಸರಿ 30 ಸಾವಿರ ವಾಹನಗಳು ಸಂಚರಿಸುತ್ತಿವೆ. ಇದು ಮುಂದಿನ 10 ವರ್ಷಗಳಲ್ಲಿ ಲಕ್ಷಕ್ಕೆ ಏರಿಕೆ ಆಗಲಿದೆ. ಹೀಗಾಗಿ, ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಈ ಕಾಮಗಾರಿಯನ್ನು 12 ತಿಂಗಳಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ನಿರ್ಮಾಣವಾದಲ್ಲಿ ವಾಹನ ಸವಾರರಿಂದ ಯಾವುದೇ ಟೋಲ್ ಸಂಗ್ರಹಿಸುವುದಿಲ್ಲ ಎಂದು ಹೇಳಿದರು. ನಗರದ ಸುತ್ತಮುತ್ತಲಿನ 60ಕ್ಕೂ ಹೆಚ್ಚು ಬಡಾವಣೆಗಳಿಗೂ ಮೂಲ ಸೌಕರ್ಯ ಕೊರತೆ ಇದೆ. ಹಾಗಾಗಿ ಗ್ರೇಟರ್ ಮೈಸೂರು ಆಗಲೇಬೇಕು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸಂಸದರು ಐದು ರೂ. ತಂದಿಲ್ಲ. ಹಿಂದಿನ ಸಂಸದರು ಕೋಮು ಸೌಹಾರ್ದ ಹಾಳು ಮಾಡುವುದರಲ್ಲೇ ನಿರತರಾಗಿದ್ದರು. ರಾಜ್ಯ ಸರ್ಕಾರ ಅಭಿವೃದ್ಧಿ ಮಾಡುವುದನ್ನೂ ಸಹಿಸಿಕೊಳ್ಳುವುದಿಲ್ಲ. ಕೇಂದ್ರದಿಂದ ಅನುದಾನವನ್ನೂ ತರುವುದಿಲ್ಲ. ಈಗಿನ ಸಂಸದರು ಈವರೆಗೆ ಹದಿನೆಂಟು ರೂಪಾಯಿಯನ್ನಾದರೂ ತಂದಿದ್ದರೆ ತಿಳಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ವಕ್ತಾರ ಮಹೇಶ್ ಇದ್ದರು.