ಮೈಸೂರು ಅರಮನೆ ಆವರಣದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಸೇರಿರುವ ಜನಸ್ತೋಮ.
- ನಗರದಲ್ಲಿ ಫಲಪುಷ್ಪ ಪ್ರದರ್ಶನ
- ಹೊಸ ವರ್ಷ ಹಿನ್ನೆಲೆಯಲ್ಲಿ 11 ದಿನಗಳ ಕಾಲ ಕಾರ್ಯಕ್ರಮ
- ಕ್ಷಾಂತರ ಹೂಗಳಿಂದ ಆಕರ್ಷಕವಾಗಿ ಶೃಂಗೇರಿಯ ದೇವಾಲಯದ ಮಾದರಿ
ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಹೂವಿನ ಲೋಕವೇ ಅನಾವರಣಗೊಂಡಿದ್ದು, ಪುಷ್ಪ ಪ್ರಿಯರನ್ನು ಕೈಬಿಸಿ ಕರೆಯುತ್ತಿದೆ.
ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆಡಳಿತ ಮಂಡಳಿಯಿಂದ 11 ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಸಂಜೆ ಚಾಲನೆ ದೊರೆಯಿತು. ಹೂವುಗಳಲ್ಲಿ ಅರಳಿರುವ ಶೃಂಗೇರಿ ದೇಗುಲ ಈ ಸಲದ ವಿಶೇಷ. ವಿವಿಧ ಆಕೃತಿಗಳೂ ಆಕರ್ಷಿಸುತ್ತಿವೆ.
ಬೆಳಗ್ಗೆ 10ರಿಂದ ರಾತ್ರಿ 9ರ ವರೆಗೆ ತೆರೆದಿರುವ ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ. ನಿತ್ಯ ಸಂಜೆ 7ರಿಂದ 9ರ ವರೆಗೆ ಬೆಳಗುವ ಅರಮನೆ ವಿದ್ಯುತ್ ದೀಪಾಲಂಕಾರ ಪ್ರದರ್ಶನಕ್ಕೆ ಕಳೆತಂದುಕೊಟ್ಟಿದೆ. ಈ ಬಾರಿ ಲಕ್ಷಾಂತರ ಹೂಗಳಿಂದ ಆಕರ್ಷಕವಾಗಿ ಶೃಂಗೇರಿಯ ದೇವಾಲಯದ ಮಾದರಿ ಎಲ್ಲರ ಕಣ್ಣು ಕುಕ್ಕುತ್ತಿದೆ. 50 ಅಡಿ ಅಗಲ, 16 ಅಡಿ ಉದ್ದ, 25 ಅಡಿ ಎತ್ತರದ ದೇವಾಲಯದ ಆಕೃತಿ ಮನಸೂರೆಗೊಳಿಸುತ್ತಿದೆ.
ಸಿರಿ ಧಾನ್ಯಗಳಿಂದ ವೃಕ್ಷಮಾತೆ ದಿವಂಗತ ಸಾಲು ಮರದ ತಿಮ್ಮಕ್ಕನವರ ಭಾವಚಿತ್ರವನ್ನು ಪ್ರದರ್ಶಿಸುವ ಮೂಲಕ ಸ್ಮರಣೆ ಮಾಡಲಾಗುತ್ತಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಮಾದರಿ ಚಿತ್ರ, ಬೃಹತ್ ಭಾರತದ ಸಂವಿಧಾನ ಪ್ರತಿ, ತರಕಾರಿಯ ಕೆತ್ತನೆ, ಉಯ್ಯಲೆಯಲ್ಲಿ ಕುಳಿತಿರುವ ಕೃಷ್ಣ ಮತ್ತು ರಾಧೆ ಹೂವಿನ ಪ್ರತಿಕೃತಿ ಗಮನ ಸೆಳೆಯುತ್ತಿದೆ. ಭಾರತದ ಮಹಿಳಾ ಕ್ರಿಕೆಟಿಗರು ಗೆದ್ದ ವಿಶ್ವ ಕಪ್ ಮಾದರಿ, ಖೋಖೋ, ಕಬಡ್ಡಿ, ಅಂಧರ ಕ್ರಿಕೆಟ್ ಆಟಗಾರರ ಭಾವಚಿತ್ರವನ್ನೂ ಡಿಜಿಟಲ್ ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತಿದೆ.
ಮೇರಿ ಗೋಲ್ಡ್, ಸಾಲ್ವಿಯಾ, ಡೇಲಿಯಾ, ಪಿಟೋನಿಯಾ, ಸೇವಂತಿಗೆ, ಕೋಲಿಯಸ್, ಸಿಲೋಷಿಯಾ, ಫ್ರೆಂಚ್ ಮೆರಿ ಗೋಲ್ಡ್, ಜೀನಿಯಾ ಸೇರಿದಂತೆ 35ಕ್ಕೂ ಹೆಚ್ಚು ಬಗೆಯ ಹೂವಿನ ಗಿಡಗಳನ್ನು 25 ಸಾವಿರ ಪಾಟ್‌ಗಳಲ್ಲಿ ಬೆಳೆಸಿ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಬಣ್ಣ ಬಣ್ಣದ ಹೂವಿನ ಗಿಡಗಳು ಕಂಗೊಳಿಸುತ್ತಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಮೆರುಗು ನೀಡಿವೆ.
ಈ ಸಲ ರಾಷ್ಟ್ರಪ್ರೇಮ ಬಿಂಬಿಸುವ ಆಪರೇಷನ್ ಸಿಂಧೂರ ಆಕೃತಿ ವಿಶೇಷವಾಗಿದ್ದು, ಉಗ್ರಗಾಮಿಗಳನ್ನು ಸದೆ ಬಡಿಯಲು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರದ ಯುದ್ಧ ಟ್ಯಾಂಕರ್, ಹಡಗು, ಫೈಟರ್ ಜೆಟ್ ಮಾದರಿಗಳೂ ಇಲ್ಲಿವೆ. ಜತೆಗೆ, ಎರಡು ನವಿಲು ಮಾದರಿ, ಚೋಟಾ ಭೀಮ್, ಕಾಳಿಂಗ ಮರ್ಧನ, ಸೈಕಲ್ ತುಳಿಯುತ್ತಿರುವ ಅಳಿಲು, ಹಂಸ, ಕೊಕ್ಕರೆ, ಪಕ್ಷಿ, ದುಂಬಿ, ಕ್ಯಾರೆಟ್ ಹಿಡಿದಿರುವ ಮೊಲ, ಮಾವಿನ ಹಣ್ಣು, ಕರಡಿ ಸೇರಿದಂತೆ ಇನ್ನಿತರ ಪ್ರತಿಕೃತಿಗಳು ಚಿಣ್ಣರ ಗಮನ ಸೆಳೆಯುತ್ತಿವೆ.
ಜಯಚಾಮರಾಜ ಒಡೆಯರ್ ರಚಿಸಿರುವ ಕೀರ್ತನೆಗಳನ್ನು ಬಿತ್ತರಿಸುವ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ದಸರಾ ಮಹೋತ್ಸವ ಅಂದು-ಇಂದು ಛಾಯಾಚಿತ್ರ ಪ್ರದರ್ಶನ, ಒಡೆಯರ್ ಸಂಸ್ಥಾನದ ಆಡಳಿತದ ಚಿತ್ರಗಳು, ದಸರಾ ಮಹೋತ್ಸವದ ಚಿತ್ರಗಳು ಮತ್ತು ವಿಡಿಯೋ ಪ್ರದರ್ಶನವನ್ನು ಪ್ರವಾಸಿಗರು ಮತ್ತು ಸಾರ್ವಜನಿಕರು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.
ಗೊಂಬೆ ಪ್ರದರ್ಶನ:
5 ಬ್ಲಾಕ್‌ಗಳಲ್ಲಿ ಗೊಂಬೆ ಪ್ರದರ್ಶನವೂ ಸೊಗಸಾಗಿದೆ. ಗೀತಾ ಶ್ರೀಹರಿ ಅವರಿಂದ ಹರ ಹರ ಮಹದೇವ, ಮೀನಾಕ್ಷಿ ಶೈಲಕುಮಾರ್ ಅವರಿಂದ ಸಂಪೂರ್ಣ ರಾಮಾಯಣ, ಹೇಮಲತಾ ಕುಮಾರಸ್ವಾಮಿ ಅವರಿಂದ ಶಿವ ಕೇಶವಾಮೃತಸಾರ, ಅನ್ನಪೂರ್ಣ ಗೋಪಾಲಕೃಷ್ಣ ಅವರಿಂದ ದೇವನೊಬ್ಬ-ನಾಮ ಹಲವು, ಸರ್ವಮಂಗಳಾ ಕೃಷ್ಣಭಟ್ ಅವರಿಂದ ತಿರುಪತಿ ಶ್ರೀನಿವಾಸ ವೈಭವ ಗೊಂಬೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಇಲ್ಲಿ ನಡೆದ ಕುಸ್ತಿ ಪಂದ್ಯಾವಳಿಯು ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬಂದಂತಹ ನೋಡುಗರ ಗಮನ ಸೆಳೆಯಿತು. ಇಲ್ಲಿಗೆ ಮೊದಲ ಬಂದ 50 ಸಾರ್ವಜನಿಕರಿಗೆ ಅಲೋವೇರ, ತುಳಸಿ, ಮಲ್ಲಿಗೆ, ವೀಳ್ಳೆದೆಲೆ, ಚಕ್ರಮುನಿ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು.
ಚಾಲನೆ: ಫಲಪುಷ್ಪ ಪ್ರದರ್ಶನಕ್ಕೆ ಶಾಸಕರಾದ ತನ್ವೀರ್‌ಸೇಠ್, ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು. ಎಂಎಲ್ಸಿ ಡಾ.ಡಿ.ತಿಮ್ಮಯ್ಯ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಯುಕೇಶ್‌ಕುಮಾರ್ ಇನ್ನಿತರರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಬಹಳಷ್ಟು ಜನಪ್ರತಿನಿಧಿಗಳು ಗೈರಾಗಿದ್ದರು.
ರಂಜಿಸಿದ ಸಂಗೀತ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಚಾಲನೆ ದೊರೆಯಿತು. ಸಂಪತ್ ತಂಡದಿಂದ ವಾದ್ಯ ಸಂಗೀತ, ಯೋಗಶ್ರೀ ತಂಡದಿಂದ ಭಕ್ತಿ ಗೀತೆಗಳು, ಲಾವಣ್ಯ ತಂಡದಿಂದ ಸುಗಮ ಸಂಗೀತ, ಎಚ್.ಎಸ್.ಸ್ನೇಹ ಅವರ ತಂಡದಿಂದ ನಾಡಗೀತೆ, ಮೈಸೂರು ಸಂಸ್ಥಾನದ ನಾಡಗೀತೆ ಕಾಯೋಶ್ರೀ ಗೌರಿ ಗೀತ ಗಾಯನ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ವಿದುಷಿ ಹಂಸಿಕಾ ಅಯ್ಯರ್ ಅವರಿಂದ ಸಂಗೀತ ಸಂಭ್ರಮ ನಡೆಯಿತು.