ಫ್ಲೆಕ್ಸ್,  
ಮೈಸೂರು

ಸಾಂಸ್ಕೃತಿಕ ನಗರಿ ಅಂದಕ್ಕೆ ಫ್ಲೆಕ್ಸ್, ಬ್ಯಾನರ್‌ಗಳು ಕಪ್ಪುಚುಕ್ಕೆ

ಪ್ರಮುಖ ಮುಖ್ಯಾಂಶಗಳು

  • ಫ್ಲೆಕ್ಸ್, ಬ್ಯಾನರ್‌ಗಳಿಂದ ಸಾಂಸ್ಕೃತಿಕ ನಗರಿ ಅಂದಕ್ಕೆ ಮಸಿ
  • ಎಲ್ಲೆಡೆ ರಾರಾಜಿಸುತ್ತಿವೆ ರಾಜಕಾರಣಿ, ನಾಯಕರ ಫಲಕಗಳು
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫ್ಲೆಕ್ಸ್ ಎಲ್ಲೆಡೆ ರಾರಾಜಿಸುತ್ತಿದ್ದು, ಇದು ಪಾರಂಪರಿಕ ನಗರಿಯ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿದೆ.
ಅನಧಿಕೃತವಾಗಿ ಫ್ಲೆಕ್ಸ್ ಬಳಕೆಯನ್ನು ನಿರ್ಬಂಧಿಸಲಾಗಿದೆ. ಈ ನಿಯಮವನ್ನು ಪಾಲನೆ ಮಾಡಬೇಕಿರುವ ರಾಜಕೀಯ ನಾಯಕರು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳೇ ಇದನ್ನು ಉಲ್ಲಂಘಿಸುತ್ತಿವೆ.
ಜನ್ಮದಿನ, ಮಹನೀಯರ ಜಯಂತಿ, ರಾಜಕೀಯ ಸಮಾವೇಶ, ವಿವಿಧ ಕಾರ್ಯಕ್ರಮಗಳು, ಮಂತ್ರಿಮಹೋದಯರ ಆಗಮನದ ಸಂದರ್ಭದಲ್ಲಿ ಫ್ಲೆಕ್ಸ್‌ಗಳು, ಬ್ಯಾನರ್‌ಗಳು ರಸ್ತೆಬದಿಗಳ ಪ್ರತ್ಯಕ್ಷವಾಗುತ್ತವೆ. 
ಶುಭಾಶಯ ಕೋರುವ, ಸ್ವಾಗತ ಕೋರುವ ನೆಪದಲ್ಲಿ ತಮ್ಮದೊಂದು ದೊಡ್ಡ ಫೋಟೋದೊಂದಿಗೆ ಫ್ಲೆಕ್ಸ್ ಹಾಕಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಏನು ಪ್ರಯೋಜನವಿಲ್ಲ. ನಾಯಕರು, ರಾಜಕಾರಣಿಗಳು ಅಗ್ಗದ ಪ್ರಚಾರಕ್ಕಾಗಿ ಈ ಮಟ್ಟಕ್ಕಿಳಿಯುತ್ತಿದ್ದಾರೆ.
ಸಂಚಾರ ಮಾಹಿತಿ, ಅಗತ್ಯ ನಾಗರಿಕ ಮಾಹಿತಿಯನ್ನು ನೀಡುವ ಉದ್ದೇಶದಿಂದ ಈ ಫಲಕಗಳ ಮೇಲೆಯೂ ಫ್ಲೆಕ್ಸ್‌ಗಳನ್ನು ಅಂಟಿಸಿ ಮೂಲ ಉದ್ದೇಶವನ್ನು ಹಾಳು ಮಾಡಲಾಗುತ್ತಿದೆ. ವಾಹನ ಚಾಲಕರು, ಪಾದಚಾರಿಗಳಿಗೆ ಗೊಂದಲ ಉಂಟು ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕ ಸುರಕ್ಷತೆಗೂ ಧಕ್ಕೆಯಾಗುತ್ತಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ನಗರದಲ್ಲಿ ಈ ರೀತಿ ಫ್ಲೆಕ್ಸ್‌ಗಳ ಹಾವಳಿ ಇರಲಿಲ್ಲ. ಇತ್ತೀಚೆಗೆ ದಿನಗಳಲ್ಲಿ ಇದು ಹೆಚ್ಚಾಗಿದೆ. ಫ್ಲೆಕ್ಸ್ ಅಳವಡಿಕೆಯಲ್ಲಿ ರಾಜಕೀಯ ನಾಯಕರ, ಜನಪ್ರತಿನಿಧಿಗಳ ಪರೋಕ್ಷ ಬೆಂಬಲ, ಸಹಕಾರ ಇದೆ. ಹೀಗಾಗಿ, ಪಾಲಿಕೆಯ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಇದುವೇ ಫ್ಲೆಕ್ಸ್ ಹಾವಳಿ ಮಿತಿಮೀರಲು ಮುಖ್ಯ ಕಾರಣವಾಗಿದೆ. 
ರಾಜಕೀಯ ಒತ್ತಡವನ್ನು ಮೀರಿ ಪಾಲಿಕೆ ಅಧಿಕಾರಿಗಳು ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು. ಇದು ಪುನರಾವರ್ತನೆಯಾಗದಂತೆ ನಿಯಮಿತವಾಗಿ ಪರಿಶೀಲನೆ ಮಾಡಬೇಕು. ಜತೆಗೆ, ಇದನ್ನು ಅಳವಡಿಸುವ ವ್ಯಕ್ತಿಗಳು, ಸಂಘಟನೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಬಿಸಿ ಮುಟ್ಟಿಸಬೇಕಿದೆ. ಆಗಲೇ ಇದಕ್ಕೆ ಕಡಿವಾಣ ಹಾಕಲು ಸಾಧ್ಯ. ಇಲ್ಲವಾದರೆ, ಅದೇ ರಾಗ, ಅದೇ ಹಾಡು.. ಎಂಬಂತಾಗಲಿದೆ. ಈ ಸಮಸ್ಯೆ ಕುರಿತು ಜನರಿಂದ ಸಂಗ್ರಹಿಸಿರುವ ಜನಾಭಿಪ್ರಾಯ ಇಲ್ಲಿದೆ.

ಅನುಮತಿ ಪಡೆಯುವುದು ಕಡ್ಡಾಯ

ಸಂಘ-ಸಂಸ್ಥೆ, ಸಂಘಟನೆಗಳು, ಸಾರ್ವಜನಿಕರು ಹಾಗೂ ಇತರರು ಸಾರ್ವಜನಿಕ ಪ್ರದೇಶದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಬೇಕಾದ್ದಲ್ಲಿ ಸಂಬಂಧಿಸಿದ ಪ್ರದೇಶ ವ್ಯಾಪ್ತಿಯ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ ಕರ್ನಾಟಕ ಮುನ್ಸಿಪಾಲಿಟಿಗಳ ಅಧಿನಿಯಮ 1964 ಕಾಯ್ದೆ ಅನ್ವಯ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶ ಇದೆ.
 ಜಿ.ಲಕ್ಷ್ಮೀಕಾಂತ್ ರೆಡ್ಡಿ
ಜಿಲ್ಲಾಧಿಕಾರಿ

ತೆರವುಗೊಳಿಸದಿದ್ದರೆ ಕ್ರಮ

ನಗರದ ಸಾರ್ವಜನಿಕ ಸ್ಥಳದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ. ಕಾರ್ಯಕ್ರಮಗಳ ನಿಗದಿತ ಅವಧಿಗೆ ಮಾತ್ರ ಸೀಮಿತಗೊಳಿಸಿ, ಕಾರ್ಯಕ್ರಮಗಳು ಮುಕ್ತಾಯವಾದ ನಂತರ ಸಂಬಂಧಪಟ್ಟವರೇ ಅವುಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ, ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಕೂಡಲೇ ತೆರವುಗೊಳಿಸಬೇಕು.
 ಶೇಖ್ ತನ್ವೀರ್ ಆಸೀಫ್ 
ಆಯುಕ್ತ, ಮೈಸೂರು ಮಹಾನಗರ ಪಾಲಿಕೆ

12 ಕಡೆ ನಿಯಮ ಉಲ್ಲಂಘನೆ

ಮೈಸೂರು ಅರಮನೆ ಮುಂಭಾಗ ಸೇರಿದಂತೆ ನಗರದ 12 ಪಾರಂಪರಿಕ ರಸ್ತೆಗಳಲ್ಲಿ ಜಾಹೀರಾತು ಫಲಕ, ಫ್ಲೆಕ್ಸ್‌ಗಳನ್ನು ಹಾಕಿ ನಿಯಮ ಉಲ್ಲಂಘಿಸಲಾಗಿದೆ. ಈ ಕುರಿತು ಪಾಲಿಕೆಯ ವಲಯ ಅಧಿಕಾರಿಗೆ ಮಾಹಿತಿ ಇಲ್ಲ. ಅನುಮತಿ ಕೊಡುವ ಮುನ್ನ ಎಚ್ಚರಿಕೆಯನ್ನೂ ವಹಿಸಿಲ್ಲ. ಈ ರೀತಿಯ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು
 ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಸಂಸದ

ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ

ಫ್ಲೆಕ್ಸ್, ಬ್ಯಾನರ್‌ಗಳ ಅಳವಡಿಕೆ ವಿಷಯವು ಎರಡು ಗುಂಪುಗಳ ನಡುವೆ ಗಲಭೆಗೂ ಕಾರಣವಾಗುತ್ತಿದೆ. ಜನರ ನಡುವೆ ಮನಸ್ತಾಪ ಉಂಟು ಮಾಡಿ ಜಗಳ ಸೃಷ್ಟಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುತ್ತಿದೆ. ಆದ್ದರಿಂದ ಫ್ಲೆಕ್ಸ್ ಹಾವಳಿ ತಡೆಗೆ ರಾಜ್ಯ ಸರ್ಕಾರ ಸೇರಿದಂತೆ ಪಾಲಿಕೆ ಸಹ ಕಠಿಣ ಕ್ರಮ ವಹಿಸಬೇಕು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಕ್ರಮಗಳು ಕಾಣುತ್ತಿಲ್ಲ ಎಂಬುದು ಬೇಸರದ ಸಂಗತಿ.
 ಎನ್.ಪುನೀತ್ ವಕೀಲರು

ಮಣ್ಣು, ನೀರು ಕಲುಷಿತ

ಫ್ಲೆಕ್ಸ್, ಬ್ಯಾನರ್‌ಗಳು ಪರಿಸರ ಮತ್ತು ಸಾರ್ವಜನಿಕ ಸುರಕ್ಷತೆಗೆ ದುಷ್ಪರಿಣಾಮ ಉಂಟು ಮಾಡುತ್ತವೆ. ಇವು ವಿಷಕಾರಿ ಪ್ಲಾಸ್ಟಿಕ್‌ನಿಂದ ತಯಾರಾಗುವುದರಿಂದ ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುತ್ತವೆ. ಸುಟ್ಟರೆ ಕ್ಯಾನ್ಸರ್‌ಕಾರಕ ವಿಷಾನಿಲ ಬಿಡುಗಡೆ ಮಾಡುತ್ತವೆ. ಅಲ್ಲದೆ, ಅಸಮರ್ಪಕ ಅಳವಡಿಕೆಯಿಂದಾಗಿ ಬೈಕ್ ಸವಾರರಿಗೆ ತಗುಲಿ ಅಪಘಾತಗಳು, ಸಾವು ಸಂಭವಿಸುವ ಅಪಾಯವಿದೆ. 
 ಪ್ರೇಮಕಾಂತ್ ಪಾಟೀಲ್, ಸಾರ್ವಜನಿಕರು

ಮೈಸೂರಿನ ಸೌಂದರ್ಯ ವಿರೂಪ

ಪಾರಂಪರಿಕ, ಸಾಂಸ್ಕೃತಿಕ, ಐತಿಹಾಸಿಕ ಹಿರಿಮೆ ಹೊಂದಿರುವ ಮೈಸೂರಿನ ಸೌಂದರ್ಯವನ್ನು ಫ್ಲೆಕ್ಸ್, ಬ್ಯಾನರ್‌ಗಳು ವಿರೂಪಗೊಳಿಸಿರುವುದು ಇಲ್ಲಿಗೆ ಭೇಟಿ ನೀಡಿದಾಗ ಗೋಚರವಾಯಿತು. ಇಲ್ಲಿಯ ಸಹಜ ಸೌಂದರ್ಯವನ್ನು ಅವು ಮರೆಮಾಡುತ್ತಿವೆ. ಇದು ಆಗಬಾರದು. ಮೈಸೂರಿನ ಘನತೆಯನ್ನು ಉಳಿಸಿಕೊಳ್ಳಬೇಕು. ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಅವರಿಗೆ ಇವುಗಳೇ ಸ್ವಾಗತ ಕೋರುವ ಮೂಲಕ ಮೈಸೂರಿನ ಕುರಿತು ಕೆಟ್ಟಭಾವನೆ ಬರುವಂತೆ ಮಾಡುತ್ತಿವೆ.
 ಮಹೇಶ್ ಪಟ್ಟಣಶೆಟ್ಟಿ, ಪ್ರವಾಸಿಗ

ಪರಿಸರ ಸ್ನೇಹಿವಸ್ತು ಬಳಸುವುದು ಸೂಕ್ತ

ಪರಿಸರಕ್ಕೆ ಮಾರಕವಾಗಿರುವ ಫ್ಲೆಕ್ಸ್, ಪ್ಲಾಸ್ಟಿಕ್ ಬಳಕೆ ಕೈಬಿಡಬೇಕು. ಅದಕ್ಕೆ ಪರ್ಯಾಯವಾಗಿ ಬಟ್ಟೆಯ ಬ್ಯಾನರ್‌ಗಳು, ಕಾಗದ ಅಥವಾ ಪರಿಸರ ಸ್ನೇಹಿವಸ್ತುಗಳನ್ನು ಬಳಸುವುದು ಸೂಕ್ತ. ಇದಕ್ಕಾಗಿ ಚಿತ್ರಕಲಾವಿದವರನ್ನು ಬಳಕೆ ಮಾಡಿಕೊಳ್ಳಬಹುದು. ಇದರಿಂದ ಕಲೆಗೆ ಉತ್ತೇಜನ ಸಿಗುವುದರೊಂದಿಗೆ ಚಿತ್ರಕಲಾವಿದರಿಗೂ ಅನುಕೂಲವಾಗಲಿದೆ.
 ಎಂ.ಎಸ್.ಶಕುಂತಲಾ, ಸಾರ್ವಜನಿಕರು

ದಂಡ ಹಾಕಿ, ಜೈಲು ಶಿಕ್ಷೆ ವಿಧಿಸಲಿ

ಅಳವಡಿಸುವ ಅನಧಿಕೃತ ಫ್ಲೆಕ್ಸ್‌ಗಳು ವಾಹನ ಸವಾರರ ಗಮನವನ್ನು ಬೇರೆಡೆಗೆ ಸೆಳೆದು ಅಪಘಾತಗಳಿಗೆ ಕಾರಣವಾಗುತ್ತವೆ. ಕೆಲವೊಮ್ಮೆ ಬ್ಯಾನರ್‌ಗಳು ಬಿದ್ದು ಬೈಕ್ ಸವಾರರು ಸಾವು-ನೋವಿನ ಘಟನೆಗಳೂ ನಡೆದಿವೆ. ಈ ಸಮಸ್ಯೆ ಕುರಿತು ರಾಜ್ಯ ಸರ್ಕಾರ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಗಂಭೀರ ಕ್ರಮ ಕೈಗೊಳ್ಳಬೇಕಿದ್ದು, ಈಗಿರುವ ಕಾಯ್ದೆಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್ ಹಾಕಿದವರಿಗೆ ದಂಡ ವಿಧಿಸಿ, ಜೈಲು ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ.
 ಆರ್.ಜೆ.ಲಿಖಿತ್‌ರಾಮ್, ಇಂಜಿನಿಯರಿಂಗ್ ವಿದ್ಯಾರ್ಥಿ