ಬಿಜೆಪಿ ಕಚೇರಿಯಲ್ಲಿ ನಗರ ಹಾಗೂ ಜಿಲ್ಲಾ ಗ್ರಾಮಾಂತರ ಬಿಜೆಪಿಯಿಂದ ಆಯೋಜಿಸಿದ್ದ ಜಿ ರಾಮ್ ಜಿ ಜಿಲ್ಲಾ ಮಟ್ಟದ ಸಮ್ಮೇಳನ ಉದ್ಘಾಟಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು.
- ಪ್ರತಿಯೊಂದಕ್ಕೂ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಆರೋಪ ಮಾಡುತ್ತಿದೆ
- ಮೊದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು
- ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರಿಗೆ ವಿಧಾನಸಭೆಯಲ್ಲಿಯೇ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರೋದು ಪ್ರಜಾಪ್ರಭುತ್ವದ ಕಗ್ಗೊಲೆ
ಮೈಸೂರು:ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ನಗರ ಹಾಗೂ ಜಿಲ್ಲಾ ಗ್ರಾಮಾಂತರ ಬಿಜೆಪಿಯಿಂದ ಆಯೋಜಿಸಿದ್ದ ಜಿ ರಾಮ್ ಜಿ ಜಿಲ್ಲಾ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದಕ್ಕೂ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಆರೋಪ ಮಾಡುತ್ತಿದೆ. ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಈ ಬಗ್ಗೆ ಹೋರಾಟ ಕೂಡ ಮಾಡಿದ್ದೇವೆ. ಮೊದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಅಗೌರವ ಮಾಡಿದ ರಾಜ್ಯ ಸರ್ಕಾರದ ನಡೆಯನ್ನ್ನು ಜನರು ಗಮನಿಸಿದ್ದಾರೆ. ರಾಜ್ಯಪಾಲರು ಸಂವಿಧಾನಾತ್ಮಕವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿ ಹೋಗಿದ್ದಾರೆ. ಆದರೆ ಶಾಸಕರ ಗೂಂಡಾ ವರ್ತನೆ ತೋರಿ ರಾಜ್ಯಪಾಲರನ್ನು ಅಡ್ಡಗಟ್ಟಿದ್ದು ಖಂಡನೀಯ ಎಂದರು.
ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಪಾಲರಿಗೆ ವಿಧಾನಸಭೆಯಲ್ಲಿಯೇ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರೋದು ಪ್ರಜಾಪ್ರಭುತ್ವದ ಕಗ್ಗೊಲೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಗ್ರಾಮಸ್ಥರ ಅನುಮತಿ ಮುಖ್ಯ: ಚಾಮುಂಡಿಬೆಟ್ಟದ ಪ್ರಸಾದ ಯೋಜನೆ ಕಾಮಗಾರಿ ವಿಚಾರವಾಗಿ ಈಗಾಗಲೇ ನನ್ನ ಅಭಿಪ್ರಾಯವನ್ನು ನಾನು ತಿಳಿಸಿದ್ದೇನೆ. ಅಲ್ಲಿ ಗ್ರಾಮಸ್ಥರು ವಿರೋಧ ಮಾಡಿದ್ದಾರೆ. ಬೆಟ್ಟದ ಪಕ್ಕದಲ್ಲೇ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಿಂದ ಗೋಪುರಕ್ಕೆ ತೊಂದರೆಯಾಗಬಹುದು. ಈ ಹಿಂದೆ ಯಾವ ರೀತಿ ಕಾಮಗಾರಿ ಮಾಡಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ ಎಂದರು.
ಕಾಮಗಾರಿಯ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡ ಬಳಿಕ ಮುಂದುವರೆಸಲಿ. ಆದರೆ ಅಧಿಕಾರಿಗಳು ತರಾತುರಿಯಲ್ಲಿ ಕಾಮಗಾರಿ ಮಾಡುತ್ತಿರುವುದು ಯಾಕೆ ಎಂಬುದು ಗೊತ್ತಿಲ್ಲ. ಚಾಮುಂಡಿ ಬೆಟ್ಟದ ಅಭಿವೃದ್ಧಿ ಕೂಡ ಆಗಬೇಕಿದೆ. ನನ್ನ ಅನುಮತಿಗಿಂತ ಕಾಮಗಾರಿಗೆ ವಿರೋಧ ಮಾಡಿರುವವರ ಅನುಮತಿ ಮುಖ್ಯ. ಜನರ ಅಭಿಪ್ರಾಯವನ್ನು ಪಡೆದು ಕಾಮಗಾರಿ ಮುಂದುವರೆಸಲಿ ಎಂದು ಹೇಳಿದರು.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರ ಭಾಗವಹಿಸುವ ಕುರಿತು ಸರಿಯಾಗಿ ಪತ್ರ ವ್ಯವಹಾರ ನಡೆದಿಲ್ಲ. ಹೀಗಾಗಿ ರಾಜ್ಯದ ಸ್ತಬ್ಧಚಿತ್ರ ಇರುವುದಿಲ್ಲ. ಸ್ತಬ್ಧಚಿತ್ರದ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿತ್ತು. ಆದರೆ ಅದಕ್ಕೆ ತೆರೆ ಬಿದ್ದಿದೆ ಎಂದರು.
ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರ ಮಾಡಿಲ್ಲ. ಇದರಿಂದ ಈ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಬಗ್ಗೆ ಮರು ಪರಿಶೀಲನೆ ಮಾಡುವಂತೆ ರೈಲ್ವೆ ಇಲಾಖೆ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು. ಕೊಡಗು ಭಾಗಕ್ಕೆ ರೈಲ್ವೆ ಯೋಜನೆ ಅಗತ್ಯವಿದೆ. ಮೈಸೂರು-ಕೊಡಗು ಜನರ ಹಿತದೃಷ್ಟಿಯಿಂದ ಯೋಜನೆ ಅನುಷ್ಠಾನಗೊಳ್ಳಬೇಕು. ಮತ್ತೊಮ್ಮೆ ಕೇಂದ್ರದ ಗಮನ ಸೆಳೆಯುತ್ತೇನೆ. ರಾಜ್ಯ ಸರ್ಕಾರ ಕೂಡ ಇದಕ್ಕೆ ಸಹಕಾರ ನೀಡಲಿ ಎಂದರು.
ಗ್ರಾಮಾಂತರ ಅಧ್ಯಕ್ಷ ಕೆ.ಎನ್.ಸುಬ್ಬಣ್ಣ ಮಾತನಾಡಿ, ಡಿಸೆಂಬರ್ ಚಳಿಗಾಲದ ಅಧಿವೇಶನದಲ್ಲಿ ಮನರೇಗಾ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಸರಿಯಾದ ಯೋಜನೆ ಹಾಕಿಕೊಂಡಿಲ್ಲ ಅಂತ ಹೆಸರು ಬದಲಾವಣೆ ಮಾಡಿ ಜಿ ರಾಮ್ ಜಿ ಅಂತ ಮಾಡಿದ್ದು, ನೀವೆಲ್ಲ ನೋಡಿದ್ದೀರಿ. ಅಂಗೀಕಾರ ಆಗಿ ರಾಷ್ಟ್ರಪತಿ ಅಂಕಿತ ಹಾಕಿದ ಮೇಲೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಆರೋಪಿಸಿದರು.
ಜಿ ರಾಮ್ ಜಿಯಲ್ಲಿ ಭ್ರಷ್ಟಾಚಾರ ಮಾಡಲು ಅವಕಾಶ ಇಲ್ಲ. ಮೊದಲು ಕೇಂದ್ರ ಸರ್ಕಾರ ಶೇ.90, ರಾಜ್ಯ ಸರ್ಕಾರ ಶೇ.10 ಕೊಡುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.40 ಕೊಡುತ್ತಿದೆ ಎಂದು ಹೇಳಿದರು.
ಯೋಜನೆ ಅಡಿ ಸಂಪೂರ್ಣ ದುರುಪಯೋಗ ಮಾಡಿ ಜೆಸಿಬಿಯಿಂದ ಕೆಲಸ ಮಾಡಿಸಿ ದುಡ್ಡು ಎತ್ತಿಕೊಳ್ಳುತ್ತಿದ್ದರು. ಆದರೆ ಇದಕ್ಕೆ ಈಗ ಅವಕಾಶವಿಲ್ಲ. ಜಿ ರಾಮ್ ಜಿಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಬದಲಾವಣೆ ಮಾಡಿಲ್ಲ. ಮೊದಲಿನ ರೀತಿಯೇ ಇದೆ. ಈಗ ಬಯೋಮೆಟ್ರಿಕ್ ಮಾಡಿದ್ದಾರೆ. ಕೆಲಸಕ್ಕೆ ಹೋದವರು ಬಯೋಮೆಟ್ರಿಕ್ ಹಾಕಬೇಕು. ಕಾಂಗ್ರೆಸ್‌ಗೆ ಇದು ಹಿಡಿಸುತ್ತಿಲ್ಲ ಎಂದರು.
ಮಹಾತ್ಮಾ ಗಾಂಧಿ ಹೆಸರು ತೆಗೆದು ರಾಮ್ ಎಂದು ಹೆಸರು ಇಟ್ಟಿದ್ದಾರೆ ಅಂತ ಹೇಳುತ್ತಾರೆ. ಅವರು ಈ ಯೋಜನೆಯನ್ನು 8 ಬಾರಿ ಬದಲಾವಣೆ ಮಾಡಿದ್ದಾರೆ. ನೇರವಾಗಿ ಗಾಂಧಿ ಹೆಸರು ಇಟ್ಟಿಲ್ಲ. ನಾವು ಆಗ ವಿರೋಧ ಮಾಡಲಿಲ್ಲ. ಹಲವಾರು ಬಾರಿ ಬದಲಾವಣೆ ಮಾಡಿದ್ದಾರೆ.
60 ವರ್ಷದ ಅಧಿಕಾರದಲ್ಲಿ ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂಬುದನ್ನು ತಿಳಿಸಲು ತಿಳಿಸಲು ಜಿ ರಾಮ್ ಜಿ ಬಗ್ಗೆ ಜಾಗೃತಿ ಸಮಾವೇಶ ಮಾಡುತ್ತಿದ್ದೇವೆ. ಪ್ರತಿ ವಿಧಾನಸಭಾ ಮಟ್ಟದಲ್ಲೂ ಮಾಡಿ ಜನರಿಗೆ ಕಾಂಗ್ರೆಸ್‌ನ ದುರಾಡಳಿತವನ್ನು ತಿಳಿಸಬೇಕು. ಪ್ರತಿಯೊಬ್ಬರಿಗೂ ಇದು ಗೊತ್ತಾಗಬೇಕು ಎಂದರು.
ನಗರಾಧ್ಯಕ್ಷ ಎಲ್.ನಾಗೇಂದ್ರ, ಬಿಜೆಪಿ ರೈತ ಮೋರ್ಚಾ ನವೀನ್, ಪ್ರಧಾನ ಕಾರ್ಯದರ್ಶಿ ವಿನಯ್, ಬಣ್ಣ ಮತ್ತು ಅರಗು ಕಾರ್ಖಾನೆ ಮಾಜಿ ಅಧ್ಯಕ್ಷ ಎನ್.ವಿ.ಪಣೀಶ್, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್, ಮಾಜಿ ಅಧ್ಯಕ್ಷ ಅಪ್ಪಣ್ಣ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮುಖಂಡ ಪುಟ್ಟಬುದ್ದಿ, ಪ್ರಫುಲ್ಲಾ ಮಲ್ಲಾಡಿ, ಎಸ್.ಮಹದೇವಯ್ಯ ಇತರರು ಇದ್ದರು.