ಜಿಲ್ಲಾ ಪಂಚಾಯಿತಿಯ ಡಿ.ದೇವರಾಜು ಅರಸು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅರುಣ್ ಕುಮಾರ್ ಮಾತನಾಡಿದರು. ಶಿವಕುಮಾರ್, ಎಸ್.ಯುಕೇಶ್ ಕುಮಾರ್, ಹುಣಸೂರು ಬಸವಣ್ಣ ಇತರರಿದ್ದರು.
ಮೈಸೂರು: ಸರ್ಕಾರ ಜಾರಿಗೆ ತಂದಿರು 5 ಗ್ಯಾರಂಟಿ ಯೋಜನೆಗಳು ಕಳೆದ ಎರಡೂವರೆ ವರ್ಷದಿಂದ ಫಲಾನುಭವಿಗಳಿಗೆ ತಲುಪುತ್ತಿವೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪ್ರಾಧಿಕಾರ ಸ್ಥಾಪನೆ ಆದ ನಂತರದಿಂದ ಇದುವರೆಗೂ 9 ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ಬಂದಿದ್ದು, ಪಾರದರ್ಶಕವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ನಿರುದ್ಯೋಗ ಯುವಕ, ಯುವತಿಯರಿಗೆ ತರಬೇತಿ ನೀಡಿ, ಅವರಿಗೆ ಅವರು ಉತ್ತಮ ಕಂಪನಿಗಳಲ್ಲಿ ಕೆಲಸ ಪಡೆದುಕೊಳ್ಳುವಂತಾಗಬೇಕು ಎಂದರು.
ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ಯುವನಿಧಿ ಯೋಜನೆಗೆ ಪದವಿ 14913 ಮತ್ತು ಡಿಪ್ಲೊಮಾ 204 ಸೇರಿದಂತೆ ಒಟ್ಟು 15117 ಅಭ್ಯರ್ಥಿಗಳು ಇದುವರೆಗೂ ನೋಂದಣಿ ಆಗಿದ್ದಾರೆ. ನವೆಂಬರ್ 2024ರವರೆಗೂ ಡಿಬಿಟಿ ಆಗಿದೆ. ಇದುವರೆಗೂ 24 ಕಂತುಗಳ ಹಣ ಪಾವತಿ ಆಗಿದೆ. ಗೃಹಲಕ್ಷ್ಮಿಯೋಜನೆಯಡಿ ಜಿಲ್ಲೆಯಲ್ಲಿ 696080 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ 672538 ಫಲಾನುಭವಿಗಳಿಗೆ ಪಾವತಿಯಾಗಿದ್ದು, ಶೇ.97ರಷ್ಟು ಸಾಧನೆ ಆಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 967567 ಅರ್ಹರಿದ್ದು ಇದರಲ್ಲಿ 963342 ಫಲಾನುಭವಿಗಳು ನೋಂದಣಿಯಾಗಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ನೋಂದಣಿಗೆ 4225 ಫಲಾನುಭವಿಗಳು ಬಾಕಿ ಇದೆ.
ಅನ್ನ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 814836 ಪಡಿತರ ಚೀಟಿಗಳು ಇದ್ದು, 22,21,714 ಫಲಾನುಭವಿಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 58.38 ಕೋಟಿ ಜನರು ಪ್ರಯಾಣ ಮಾಡಿದ್ದಾರೆ. ಶೇ.68.39 ರಷ್ಟು ಪ್ರಯಾಣಿಕರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಯ ಪ್ರಯಾಣಿಕರಿಂದ 1022.72 ಕೋಟಿ ರೂ. ಆದಾಯ ಬಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಹುಣಸೂರು ಬಸವಣ್ಣ ಇತರರಿದ್ದರು.