ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ 5 ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್‌ನಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. 
ಮೈಸೂರು

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ ಐದು ದಿನ ಕೆಲಸಕ್ಕೆ ಒತ್ತಾಯ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ 5 ಕೆಲಸದ ದಿನಗಳ ವ್ಯವಸ್ಥೆ ಜಾರಿಗೆ ತರಬೇಕು
  • ಎರಡು ವರ್ಷಗಳಿಂದ ಸರ್ಕಾರದ ಅನುಮೋದನೆ ಬಾಕಿಯಿದೆ
ಮೈಸೂರು:ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ 5 ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್‌ನಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಬ್ಯಾಂಕ್ ಉದ್ಯೋಗಿಗಳು, ಅಧಿಕಾರಿಗಳ 9 ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಬ್ಯಾಂಕ್ ಮುಷ್ಕರ ಬೆಂಬಲಿಸಿ ವ್ಯಕ್ತಪಡಿಸಿ ಸರಸ್ವತಿಪುರಂನಲ್ಲಿರುವ ಎಸ್‌ಬಿಐ ಪ್ರಾದೇಶಿಕ ಕಚೇರಿ ಮುಂಭಾಗ ಮುಷ್ಕರ ನಡೆಸಿದ ಬ್ಯಾಂಕ್ ಉದ್ಯೋಗಿಗಳು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರಕ್ಕೆ 5 ಕೆಲಸದ ದಿನಗಳ ವ್ಯವಸ್ಥೆ ಜಾರಿಗೆ ತರಬೇಕು ಎಂದು ಬೇಡಿಕೆ ಸಲ್ಲಿಸುತ್ತಲೇ ಇದ್ದೇವೆ. ಆದರೆ ಈವರೆಗೂ ಜಾರಿಯಾಗಿಲ್ಲ. 2015ರಲ್ಲಿ ಸಹಿ ಮಾಡಲಾದ 10ನೇ ದ್ವಿಪಕ್ಷೀಯ ಒಪ್ಪಂದದಂತೆ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರಗಳನ್ನು ರಜೆ ಎಂದು ಘೋಷಿಸಲಾಗಿದೆ. ಉಳಿದ ಶನಿವಾರಗಳನ್ನು ಅರ್ಧ ದಿನದ ಬದಲು ಪೂರ್ಣ ಕೆಲಸದ ದಿನಗಳಾಗಿ ಮಾಡಲಾಗಿದೆ. ಆ ಸಮಯದಲ್ಲಿ ಉಳಿದ ಎಲ್ಲ ಶನಿವಾರಗಳನ್ನು ರಜೆ ಎಂದು ಘೋಷಿಸುವ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಈಡೇರಿಸಿಲ್ಲ ಎಂದು ಕಿಡಿಕಾರಿದರು.
2023ರಲ್ಲಿ ನಡೆದ ಚರ್ಚೆಯ ನಂತರ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನದ ಕೆಲಸದ ಸಮಯವನ್ನು 40 ನಿಮಿಷ ಹೆಚ್ಚಿಸಿ, ಉಳಿದ ಎಲ್ಲ ಶನಿವಾರ ರಜೆ ಘೋಷಿಸುವ ಒಪ್ಪಂದವಾಯಿತು. ಆದರೆ ದುಃಖಕರ ಸಂಗತಿ ಏನೆಂದರೆ ಕಳೆದ ಎರಡು ವರ್ಷಗಳಿಂದ ಸರ್ಕಾರದ ಅನುಮೋದನೆ ಬಾಕಿಯಿದೆ ಎಂದು ದೂರಿದರು.
ಈಗಾಗಲೇ ಆರ್‌ಬಿಐ, ಎಲ್‌ಐಸಿ, ಜಿಐಸಿಗಳಲ್ಲಿ ವಾರಕ್ಕೆ 5 ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಬ್ಯಾಂಕುಗಳಲ್ಲೂ ಉಳಿದ ದಿನಗಳ ಕೆಲಸದ ಅವಧಿ ಹೆಚ್ಚಿಸಿ, ಎಲ್ಲ ಶನಿವಾರ ರಜೆ ಘೋಷಿಸಿದರೆ ಗ್ರಾಗಕರಿಗೂ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಆನಂದ್, ಭವಿತ್, ಬಾಲಕೃಷ್ಣ, ಕುಮಾರ್, ಮಹೇಶ್ ಸೇರಿದಂತೆ ವಿವಿಧ ಬ್ಯಾಂಕುಗಳ ಸಿಬ್ಬಂದಿ, ಅಧಿಕಾರಿಗಳು, ನೌಕರರು ಭಾಗವಹಿಸಿದ್ದರು.