ಮಾದಕ ವಸ್ತು 
ಮೈಸೂರು

ಮಾದಕವಸ್ತು ಮಾರುತ್ತಿದ್ದ ಐವರ ಸೆರೆ

ಅವಿನಾಶ್ ಜೈನಹಳ್ಳಿ
ಮೈಸೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಣೆ ಮೇಲೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ನಗರದ ಮಂಡಿ ಪೊಲೀಸ್ ಠಾಣೆ ಹಾಗೂ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಹಾಗೂ ಮಂಡಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 3.14 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಡಿ ಮೊಹಲ್ಲಾ ನಿವಾಸಿ ಮೊಹಮ್ಮದ್ ಕರೀಂ (29), ಕಲ್ಯಾಣಗಿರಿ ನಿವಾಸಿ ನಿಷಾದ್ ಪಾಷ (36) ಬಂಧಿತರು. ಸದ್ಯ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಮೊಹಮ್ಮದ್ ಕರೀಂ ಮೇಲೆ ಈಗಾಗಲೇ ಮಂಡಿ, ಎನ್.ಆರ್., ಸೆನ್ ಪೊಲೀಸ್ ಠಾಣೆಯಲ್ಲಿ ಒಟ್ಟು 5 ಎನ್‌ಡಿಪಿಎಸ್ ಪ್ರಕರಣ ದಾಖಲಾಗಿವೆ. ಆರೋಪಿ ನಿಷಾದ್ ಪಾಷ ಮೇಲೆ ಈಗಾಗಲೇ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ 3 ಕಳ್ಳತನ ಮತ್ತು ಸುಲಿಗೆ ಪ್ರಕರಣಗಳು ಹಾಗೂ ನಜರ್‌ಬಾದ್ ಪೊಲೀಸ್ ಠಾಣೆ ಮತ್ತು ಉದಯಗಿರಿ ಪೊಲೀಸ್ ಠಾಣೆಯಲ್ಲಿ 2 ಎನ್‌ಡಿಪಿಎಸ್ ಪ್ರಕರಣಗಳು ಸೇರಿದಂತೆ ಒಟ್ಟು 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.