ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಚಾರಿಬಟಲ್ ಟ್ರಸ್ಟ್ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ಎಚ್.ಎಂ.ಗಣೇಶ್ ಪ್ರಸಾದ್ ಇನ್ನಿತರರಿದ್ದರು.
- ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಆಶ್ವಾಸನೆ
ಇತರ ಸಮಾಜಗಳಂತೆ ವಾಲ್ಮೀಕಿ ಸಮಾಜ ಕೂಡ ಸರ್ವತೋಮುಖ ಅಭಿವೃದ್ಧಿಯಾಗಬೇಕಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ರಾಮಕೃಷ್ಣನಗರದ ಐ ಬ್ಲಾಕ್‌ನಲ್ಲಿರುವ ವಾಸು ಬಡಾವಣೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಚಾರಿಬಟಲ್ ಟ್ರಸ್ಟ್ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ವಾಲ್ಮೀಕಿ ಸಮಾಜ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಆಗಬೇಕು. ಭವಿಷ್ಯದಲ್ಲಿ ನಾಯಕರಾಗುವ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಸಮುದಾಯವು ಈಗಲೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಬಹಳ ಹಿಂದುಳಿದಿದ್ದು, ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಶಿಕ್ಷಣ ಪಡೆದಷ್ಟು ಸರ್ಕಾರಿ, ಖಾಸಗಿ ಕೆಲಸ ಪಡೆಯಬಹುದು. ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಸ್ಥಾನ ಅಲಂಕರಿಸಬೇಕಾದರೆ ಶಿಕ್ಷಣವೇ ಮುಖ್ಯ ಎಂದರು.
ಸರ್ಕಾರವು ಮಂಜೂರು ಮಾಡಿರುವ ಐದು ಎಕರೆ ಜಮೀನನ್ನು ಶೀಘ್ರದಲ್ಲೇ ಹಸ್ತಾಂತರ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಐದು ಎಕರೆ ಜಾಗವನ್ನು ಮಂಜೂರು ಮಾಡಿದ್ದರು.
ಈಗ ಅದನ್ನು ದುರಸ್ತು ಮಾಡಿಸಿ ಹಸ್ತಾಂತರ ಮಾಡಲಾಗುವುದು. ಕಂದಾಯ ಇಲಾಖೆಯಲ್ಲಿ ಆಗಬೇಕಿರುವ ಪ್ರಕ್ರಿಯೆ ಮುಗಿಸಿ ಟ್ರಸ್ಟ್‌ಗೆ ಹಸ್ತಾಂತರಿಸಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು 25 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಅದು ಕೂಡ ಯಾವ ಹಂತದಲ್ಲಿ ಇದೆ ಎಂಬುದನ್ನು ಪರಿಶೀಲಿಸಿ ತಕ್ಷಣ ಬಿಡುಗಡೆ ಮಾಡಲು ಗಮನಹರಿಸಲಾಗುವುದು. ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕೋಚಿಂಗ್ ಸೆಂಟರ್ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ದೊಡ್ಡ ಇತಿಹಾಸವಿದೆ. ಈ ಸಮಾಜದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ವಸ್ತುಸಂಗ್ರಹಾಲಯ ಸ್ಥಾಪನೆ ಮಾಡುವುದು ಅಗತ್ಯವಿದೆ. ಅದಕ್ಕೆ ಬೇಕಾದ ನೆರವನ್ನು ಕೊಡಲಾಗುವುದು. ಟ್ರಸ್ಟ್ ನಿರ್ಮಿಸುವ ಕಟ್ಟಡಕ್ಕೆ ಬೇಕಾದ ಅನುದಾನವನ್ನು ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾಯಕ ಸಮಾಜ ಶೈಕ್ಷಣಿಕ, ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲು ಶಿಕ್ಷಣಕ್ಕೆ ಆದ್ಯತೆ ಕೊಡಬೇಕಿದೆ. ಮುಂದಿನ ದಿನಗಳಲ್ಲಿ ಕೋಚಿಂಗ್ ಸೆಂಟರ್, ವಸತಿನಿಲಯ ಸೇರಿದಂತೆ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಬೇಕಾದ ನೆರವು ಕಲ್ಪಿಸಲಾಗುವುದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಮಾತನಾಡಿ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸಿದ್ದರಾಮಯ್ಯ ಅವರು ಹತ್ತು ಎಕರೆ ಜಮೀನು ಮಂಜೂರು ಮಾಡಿದರೂ ಜಿಲ್ಲಾಡಳಿತದಿಂದ 5 ಎಕರೆ ಮಾತ್ರ ಮಂಜೂರು ಮಾಡಲಾಗಿದೆ. 25 ಕೋಟಿ ರೂ.ನೀಡಲು ಒಪ್ಪಿಗೆ ನೀಡಿದ್ದು, ತಕ್ಷಣವೇ ಮಂಜೂರು ಮಾಡಿಕೊಡಬೇಕು ಎಂದು ಹೇಳಿದರು.
ಟ್ರಸ್ಟ್ ಕಾರ್ಯದರ್ಶಿ ದೇವರಾಜ ಟಿ.ಕಾಟೂರ್ ಮಾತನಾಡಿ, ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಜಿಲ್ಲೆಗಳಲ್ಲಿ ವಾಲ್ಮೀಕಿ ನಾಯಕ ಸಮಾಜದ ಯಾವುದೇ ಟ್ರಸ್ಟ್ ರಚನೆಯಾಗಿರಲಿಲ್ಲ. ಇದೀಗ ಟ್ರಸ್ಟ್ ರಚನೆ ಮಾಡಿ ಸಮಾಜ ಸಂಘಟನೆಗೆ ಕಚೇರಿ ಸ್ಥಾಪಿಸಲಾಗಿದೆ ಎಂದರು.
ಶಾಸಕರಾದ ಟಿ.ಎಸ್.ಶ್ರೀವತ್ಸ, ದರ್ಶನ್ ಧ್ರುವನಾರಾಯಣ, ಎಚ್.ಎಂ.ಗಣೇಶ್ ಪ್ರಸಾದ್, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಮಾಜಿ ಮೇಯರ್ ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ಜಿಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ, ತಲಕಾಡು ಮಂಜುನಾಥನ್, ಟ್ರಸ್ಟ್ ಅಧ್ಯಕ್ಷ ಬಿ.ಶಿವಣ್ಣ, ಖಜಾಂಚಿ ಸುರೇಶ್‌ಬಾಬು, ಡಾ.ಜಿ.ಪ್ರಶಾಂತನಾಯಕ, ಡಾ.ಬಿ.ನಂಜುಂಡಸ್ವಾಮಿ, ಜಿ.ಶ್ರೀನಿವಾಸ್, ಎ.ಆರ್.ರಾಜನಾಯಕ, ವೈ.ಪಿ.ಜಗದೀಶ್ ಮೂರ್ತಿ ಇನ್ನಿತರರಿದ್ದರು.