ಫಿಟ್ ಮೈಸೂರು ವಾಕಥಾನ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ಸಿ.ಎನ್.ಮಂಜೇಗೌಡ, ಸುನೀಲ್ ಬೋಸ್, ಪ್ರೊ.ಎನ್.ಕೆ. ಲೋಕನಾಥ್, ಎಂ.ಕೆ. ಸವಿತಾ ಇತರರಿದ್ದರು.
- 12 ಸಾವಿರಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ 5 ಕಿ.ಮೀ. ದೂರ ಹೆಜ್ಜೆ
- ಸ್ವಚ್ಛತೆ ಬಗ್ಗೆಯೂ ಅರಿವು
ಮೈಸೂರು: ವಿವಿಧ ಸಂಘಟನೆಗಳು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಫಿಟ್ ಮೈಸೂರು ವಾಕಥಾನ್’ ಯಶಸ್ವಿಗೊಂಡಿತು. 12 ಸಾವಿರಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ 5 ಕಿ.ಮೀ. ದೂರ ಹೆಜ್ಜೆ ಹಾಕಿದರು.
ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಿಂದ ಆರಂಭವಾದ ನಡಿಗೆ, ಬೋಗಾದಿ ರಸ್ತೆ, ಸರಸ್ವತಿಪುರಂ ಅಗ್ನಿಶಾಮಕ ಠಾಣೆ ರಸ್ತೆ, ಮಹಾರಾಜ ಕಾಲೇಜು ಮೈದಾನ ವೃತ್ತ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಹುಣಸೂರು ಮುಖ್ಯರಸ್ತೆ, ಪಡುವಾರಹಳ್ಳಿ ಜಂಕ್ಷನ್ ಮಾರ್ಗವಾಗಿ ಸಂಚರಿಸಿ ಸೆನೆಟ್ ಭವನದ ಆವರಣದಲ್ಲಿ ಅಂತ್ಯಗೊಂಡಿತು. ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ವಾಕಥಾನ್‌ನಲ್ಲಿ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸಲಾಯಿತು.
ಸಾರ್ವಜನಿಕರೊಂದಿಗೆ ಅನೇಕ ಗಣ್ಯರು ಕೂಡ ಅತ್ಯುತ್ಸಾಹದಿಂದ ಹೆಜ್ಜೆಹಾಕಿದರು. ಆರಂಭಿಕ ಸ್ಥಳದಿಂದ ಅಂತ್ಯದವರೆಗೂ ಕೊಂಚವೂ ಉತ್ಸಾಹ ಕಳೆದುಕೊಳ್ಳದೆ ನಿರಾಯಾಸವಾಗಿ ಸಾಗುವ ಮೂಲಕ ಎಲ್ಲರ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
ಸಂಸದ ಸುನೀಲ್ ಬೋಸ್, ಶಾಸಕ ಟಿ.ಎಸ್.ಶ್ರೀವತ್ಸ, ಎಂಎಲ್‌ಸಿಗಳಾದ ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟಿಲ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿಸಿಪಿ ಸುಂದರ್ ರಾಜ್, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಕುಲಸಚಿವ ನಾಗರಾಜ್, ಮೈಸೂರು ವಿವಿ ಪ್ರಾಧ್ಯಪಕರಾದ ಸಪ್ನ, ಜ್ಯೋತಿ, ಶ್ರೀನಿವಾಸ್, ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀಹರಿ ದ್ವಾರಕನಾಥ್ ಸೇರಿ ಇತರರು ಭಾಗವಹಿಸಿದ್ದರು.