ಹುಣಸೂರು ತಾಲೂಕು ರತ್ನಪುರಿಯಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಡಾ.ಕವಿತಾ ಮಾತನಾಡಿದರು. ಡಾ.ರಾಘವೇಂದ್ರ, ಡಾ.ಅಭಿಜಿತ್, ರಾಜೇಶ್ವರಿ ಇತರರಿದ್ದಾರೆ. ಹುಣಸೂರು
ಮೈಸೂರು

ಹಾವು ಕಚ್ಚಿದವರಿಗೆ ಮೊದಲು ಧೈರ್ಯ ತುಂಬಿ

ಅಂತಾರಾಷ್ಟ್ರೀಯ ಉರಗ ಕಡಿತ ಜಾಗೃತಿ ದಿನಾಚರಣೆಯಲ್ಲಿ ಡಾ.ಕವಿತಾ ಸಲಹೆ

ಹುಣಸೂರು: ಹಾವು ಕಡಿತಕ್ಕೆ ತುತ್ತಾಗಿರುವ ವ್ಯಕ್ತಿಗೆ ಮೊದಲಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾ ಸರ್ವೇಕ್ಷಣ ಘಟಕ ಕಚೇರಿಯ ಎಪಿಡಮಾಲಜಿಸ್ಟ್ ಡಾ.ಕವಿತಾ ಹೇಳಿದರು.

ತಾಲೂಕಿನ ರತ್ನಪುರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ರತ್ನಪುರಿಯ ಲ್ಯಾನ್ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾವು ಕಡಿತದ ವೇಳೆ ನಾವೆಲ್ಲರೂ ಗಾಬರಿಗೊಳಗಾಗಿ ಬಾಧಿತ ವ್ಯಕ್ತಿಯೂ ಗಾಬರಿ ಆಗುವಂತೆ ಮಾಡುತ್ತೇವೆ. ಇದು ಸರಿಯಲ್ಲ. ಬಾಧಿತ ವ್ಯಕ್ತಿ ಹೆದರದಂತೆ ನೋಡಿಕೊಳ್ಳಬೇಕು. ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಟ್ ಮುಂತಾದ ಯಾವುದೇ ವಸ್ತುಗಳಿದ್ದರೂ ತೆಗೆಯಬೇಕು. ಬಾಧಿತ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ, ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ತಕ್ಷಣವೇ ಸಮೀಪದ ಆಸ್ಪತ್ರಗೆ ಕರೆದೊಯ್ಯುವುದು ಅಗತ್ಯ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಹಾವು ಕಡಿತಕ್ಕೆ ಉಚಿತವಾಗಿ ಲಸಿಕೆ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಡಾ.ರಾಘವೇಂದ್ರ ಮಾತನಾಡಿ, ಹಾವು ಕಡಿತಕ್ಕೆ ಚಿಕಿತ್ಸೆ ಕುರಿತು ನಮ್ಮಲ್ಲಿ ಹಲವು ಮೂಢನಂಬಿಕೆಗಳಿವೆ. ಬಾಯಿಯಿಂದ ಕಚ್ಚಿದ ಜಾಗದ ರಕ್ತವನ್ನು ಹೀರಿ ತೆಗೆಯುವುದು, ಕೈ ಔಷಧ ನೀಡುವುದು ಮುಂತಾದವನ್ನು ಖಂಡಿತ ಮಾಡಬಾರದು. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಅನ್ವಯ ಪ್ರತಿವರ್ಷ ವಿಶ್ವದಾದ್ಯಂತ ಸುಮಾರು 54 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಿದ್ದಾರೆ. 80 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹುಲ್ಲುಗಾವಲು ಪ್ರದೇಶದಲ್ಲಿ ಗಟ್ಟಿಯಾದ ಬೂಟುಗಳನ್ನು ಹಾಕಿಕೊಂಡು ನಡೆದಾಡಬೇಕು. ರಾತ್ರಿ ಹೊತ್ತು ಟಾರ್ಚ್ ಬಳಸಿ ಹೊರಗೆ ಓಡಾಡಬೇಕು ಎಂದು ಸಲಹೆ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಭಿಜಿತ್, ಲ್ಯಾನ್ ಸಂಸ್ಥೆಯ ದೃತಿ, ಶಾಲಿನಿ ಮಾತನಾಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ರೇಬಿಸ್ ಕಾಯಿಲೆ ಕುರಿತು ಮಾಹಿತಿ ನೀಡಿದರು. ಶಿಕ್ಷಕ ಪ್ರದೀಪ್, ಎಚ್‌ಐಒ ಚಂದ್ರೇಗೌಡ, ಪುನೀತ್, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.