ಬೆಟ್ಟದಪುರ ಸಮೀಪದ ಗಂಗೇಗೌಡನ ಕೊಪ್ಪಲು ಗ್ರಾಮದ ಹೊರವಲಯದಲ್ಲಿರುವ ಎರಡು ರಾಗಿ ಹುಲ್ಲಿನ ಮೇದೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಗಲಾಗಿದೆ.
ಬೆಟ್ಟದಪುರ: ಬೆಟ್ಟದಪುರ ಸಮೀಪದ ಗಂಗೇಗೌಡನ ಕೊಪ್ಪಲು ಗ್ರಾಮದ ಹೊರವಲಯದಲ್ಲಿರುವ ಎರಡು ರಾಗಿ ಹುಲ್ಲಿನ ಮೇದೆಗೆ ಸೋಮವಾರ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಗಲಾಗಿದೆ.
ಗ್ರಾಮದ ಕುಮಾರ್ ಮತ್ತು ಮಾದೇಗೌಡ ಇಬ್ಬರು ಸಹೋದರರಿಗೆ ಸೇರಿದ ರಾಗಿ ಒಕ್ಕಣೆ ಮಾಡಲು ಇಟ್ಟಿದ್ದ ಗುಡ್ಡೆಯಲ್ಲಿ ಮಧ್ಯಾಹ್ನದ ವೇಳೆ ಏಕಾಏಕಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ, ಮೇದೆಯಲ್ಲಿದ್ದ ಸಂಪೂರ್ಣ ರಾಗಿ ಹುಲ್ಲು ಸುಟ್ಟು ಭಸ್ಮವಾಗಿದೆ. ಬೆಂಕಿಯ ತೀವ್ರತೆಯಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ನೀರು ಮತ್ತು ಮಣ್ಣು ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಗಾಳಿಯ ವೇಗ ಹೆಚ್ಚಿದ್ದರಿಂದ ಬೆಂಕಿ ನಿಯಂತ್ರಣಕ್ಕೆ ಬರಲು ತಡವಾಯಿತು. ವಿಚಾರ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ನಂದಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗ್ರಾಮದ ಮುಖಂಡ ಸುನಿಲ್ ಕುಮಾರ್ ಜಿ.ಕೆ ಮಾತನಾಡಿ ಕುಮಾರ್ ಹಾಗೂ ಮಾದೇಗೌಡ ಅವರಿಗೆ, ಈ ಅವಘಡದಿಂದ ನಷ್ಟ ಉಂಟಾಗಿದೆ. ಇದಲ್ಲದೆ ತಕ್ಷಣದಲ್ಲಿಯೇ ಅಗ್ನಿಶಾಮಕದಳದವರು ಆಗಮಿಸಿದರೆ ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಬಹುದಿತ್ತು. ಪಿರಿಯಾಪಟ್ಟಣದಲ್ಲಿ ಅಗ್ನಿಶಾಮಕ ದಳ ಸಿಗದೇ ಇದ್ದಾಗ ಕುಶಾಲನಗರದಿಂದ ಆಗಮಿಸಿ ಬೆಂಕಿಯನ್ನು ನಂದಿಸಲಾಯಿತು. ಈ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.