ನಗರದ ನಜರಾಬಾದ್‌ನ ನೆಕ್ಸಸ್ ಮಾಲ್‌ನಲ್ಲಿ ಗುರುವಾರ ಅಗ್ನಿ ಅವಘಡ ಕಲ್ಪಿತ ಪ್ರದರ್ಶನ ನಡೆಯಿತು.
- ತುರ್ತಾಗಿ ಧಾವಿಸಿದ ಅಗ್ನಿಶಾಮಕ ದಳದಿಂದ ಹಲವರ ರಕ್ಷಣೆ
- ಕಲ್ಪಿತ ಪ್ರದರ್ಶನ ಯಶಸ್ವಿ
ಅಗ್ನಿ ಅವಘಡಗಳ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವ ಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ನಗರದ ನಜರಾಬಾದ್‌ನ ನೆಕ್ಸಸ್ ಮಾಲ್‌ನಲ್ಲಿ ಗುರುವಾರ ಅಗ್ನಿ ಅವಘಡದ ಪೂರ್ಣ ಪ್ರಮಾಣದ (ಫುಲ್ ಫ್ಲೆಡ್ಜ್ ಮಾಕ್ ಎಕ್ಸೈಸ್) ಕಲ್ಪಿತ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರ ನಿರ್ದೇಶನದಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಆಯೋಜಿಸಿದ್ದ ಅಗ್ನಿ ಅವಘಡ ಕಲ್ಪಿತ ಪ್ರದರ್ಶನದ ಅಂಗವಾಗಿ ನಗರದಲ್ಲೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪ್ರದರ್ಶನ ನೆರವೇರಿತು.
ಗುರುವಾರ ಬೆಳಗ್ಗೆ 9.10ಕ್ಕೆ ಆರಂಭವಾದ ಪ್ರದರ್ಶನದಲ್ಲಿ, ಮಾಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಕಾಲ್ಪನಿಕ ಸನ್ನಿವೇಶವನ್ನು ಸೃಷ್ಟಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಅಗ್ನಿಶಾಮಕ ಸಿಬ್ಬಂದಿ ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಮಾಲ್‌ನಲ್ಲಿದ್ದ ಸಾರ್ವಜನಿಕರನ್ನು ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಲಾಯಿತು. ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವ ಪ್ರಾತ್ಯಕ್ಷಿಕೆಯನ್ನೂ ಪ್ರದರ್ಶಿಸಲಾಯಿತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಆಂಬುಲೆನ್ಸ್ ಸಿಬ್ಬಂದಿ ಹಾಗೂ ನೆಕ್ಸಸ್ ಮಾಲ್‌ನ ಸಿಬ್ಬಂದಿ ಸಮನ್ವಯದಿಂದ ಪಾಲ್ಗೊಂಡರು. ತುರ್ತು ಪರಿಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಸ್ಪಂದನೆ ಮತ್ತು ಸಮನ್ವಯವನ್ನು ಪರೀಕ್ಷಿಸುವ ಉದ್ದೇಶದಿಂದ ಈ ಕಲ್ಪಿತ ಪ್ರದರ್ಶನ ಆಯೋಜಿಸಲಾಗಿತ್ತು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.