ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ
ನಗರದ ಬನ್ನೂರು ರಸ್ತೆಯ ಕಾವೇರಿ ನರ್ಸಿಂಗ್ ಕಾಲೇಜಿನ ಕಟ್ಟಡದಲ್ಲಿ ಶನಿವಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಾಲ್ಕು ಅಂತಸ್ತಿನ ಕಾಲೇಜಿನ ಕಟ್ಟಡದ ಬಾಲ್ಕನಿಯಲ್ಲಿ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ತಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಕಾಲೇಜಿನ ಸಿಬ್ಬಂದಿ, ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಕಾಲೇಜಿನ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿ ಅನಾಹುತವಾಗದಂತೆ ಎಚ್ಚರ ವಹಿಸಿದ್ದಾರೆ.
ಕಟ್ಟಡದ ಛಾವಣಿಯನ್ನು ಕಬ್ಬಿಣದ ಶೀಟ್‌ನಿಂದ ಮುಚ್ಚಲಾಗಿದ್ದು, ಸುತ್ತಲೂ ಬಟ್ಟೆಯ ಕರ್ಟನ್ ಇತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಕರ್ಟನ್‌ಗೆ ಬೆಂಕಿ ಹೊತ್ತಿಕೊಂಡು ಎಲ್ಲೆಡೆ ವ್ಯಾಪಿಸಿ ದಟ್ಟ ಹೊಗೆ ಆವರಿಸಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿಯನ್ನು ನಂದಿಸಿದರು.