ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಲು ಮಂಟಪಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಅದರ ಮೇಲೆ ಬೆಳೆದಿದ್ದ ಗಿಡ ಗಂಟಿಗಳು ಹೊತ್ತಿ ಉರಿಯುತ್ತಿರುವುದು.
ನಂಜನಗೂಡು: ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ ನಂಜನಗೂಡಿನ ಕಲ್ಲು ಮಂಟಪಕ್ಕೆ ಶುಕ್ರವಾರ ಸಂಜೆ ಆಕಸ್ಮಿಕ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಕಲ್ಲು ಮಂಟಪದ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಪಕವಾಗಿ ಹಬ್ಬಿತು. ಮಂಟಪದ ಮೇಲಿದ್ದ ಗಿಡ ಗಂಟಿಗಳೆಲ್ಲವೂ ಹೊತ್ತಿ ಉರಿದವು. ಮಂಟಪದ ಅಕ್ಕಪಕ್ಕ ಇರುವ ಮನೆಯ ನಿವಾಸಿಗಳು ನೀರು ಎರಚಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.