ಮೈಸೂರಿನ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಗುರುವಾರ ‘ಸಿನಿರಮಾ’ 8ನೇ ರಾಷ್ಟ್ರ ಮಟ್ಟದ ಕಿರುಚಿತ್ರೋತ್ಸವವನ್ನು ನಟ ಶ್ರೀನಿವಾಸ್ ಪ್ರಭು ಉದ್ಘಾಟಿಸಿದರು. ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಡಾ. ಜಿ. ರವೀಂದ್ರನಾಥ್, ಪ್ರೊ. ಶೇಖರ್ ಬಾಬು, ಡಾ. ರೇಖಾ ಭಟ್ ಹಾಗೂ ಇತರರು ಇದ್ದರು.
ಮೈಸೂರು: ಚಲನಚಿತ್ರಗಳಿಗೆ ಪ್ರೇಕ್ಷಕರ ಮನಸ್ಸನ್ನು ಪರಿವರ್ತಿಸುವ ಶಕ್ತಿ ಇದೆ. ಆದ್ದರಿಂದ ನಿರ್ದೇಶಕರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೇ ವಿನಃ ಪ್ರೇಕ್ಷಕರನ್ನು ತಪ್ಪು ದಾರಿಗೆ ದೂಡಬಾರದು ಎಂದು ನಟ ಶ್ರೀನಿವಾಸ್ ಪ್ರಭು ಹೇಳಿದರು.
ಅಮೃತ ವಿಶ್ವವಿದ್ಯಾಪೀಠಂನಲ್ಲಿ ‘ಸಿನಿರಮಾ’ 8ನೇ ರಾಷ್ಟ್ರ ಮಟ್ಟದ ಕಿರುಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿ, ನೀವೆಲ್ಲರೂ ದೊಡ್ಡ ಕನಸುಗಳೊಂದಿಗೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುತ್ತೀರಿ. ಆದರೆ ಸಿನಿಮಾ ಕ್ಷೇತ್ರ ಸುಲಭವಲ್ಲ, ಪ್ರತಿ ಹೆಜ್ಜೆಯಲ್ಲೂ ಸವಾಲುಗ ಳಿಂದ ತುಂಬಿದೆ. ಅದನ್ನು ಎದುರಿಸಲು ಧೈರ್ಯ, ಸಹನೆ ಮತ್ತು ಧನಾತ್ಮಕ ಮನಸ್ಥಿತಿ ಬೇಕು ಎಂದು ಸಲಹೆ ನೀಡಿದರು.
ನಾಟಕದಲ್ಲಿ ತಪ್ಪಿಗೆ ಅವಕಾಶವಿಲ್ಲ, ರಿಟೇಕ್‌ಗಳಿಲ್ಲ. ಅದು ಒಬ್ಬ ನಟನನ್ನು ನೈಜ ಪರೀಕ್ಷೆ ತೆಗೆದುಕೊಳ್ಳುತ್ತದೆ. ಆದರೆ, ಸಿನಿಮಾ ಹಾಗಲ್ಲ, ನಿರ್ದೇಶಕನೇ ಸಿನಿಮಾದ ಸಾರಥಿ. ಆರಂಭದಲ್ಲಿ ಟಿವಿ, ಸಿನಿಮಾ ಉದ್ಯಮಕ್ಕೆ ಬೆದರಿಕೆಯಾಗಿ ಕಂಡುಬಂದರೂ, ಕಾಲಕ್ರಮೇಣ ಎರಡೂ ಮಾಧ್ಯಮಗಳು ಸಹಬಾಳ್ವೆ ನಡೆಸಲು ಕಲಿತವು. ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಲು ಟಿವಿ ಶೋಗಳು ವಿಕಸನಗೊಂಡವು ಎಂದು ಹೇಳಿದರು.
ಯುವ ಚಲನಚಿತ್ರಕಾರರು ತಿಳುವಳಿಕೆ, ಜಾಣ್ಮೆ ಮತ್ತು ಎಚ್ಚರಿಕೆಯಿಂದ ಕಲಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಯುವ ನಿರ್ದೇಶಕರು ಪ್ರೇಕ್ಷಕರನ್ನು ತಮ್ಮ ಸ್ನೇಹಿತರಂತೆ ಭಾವಿಸಿ ಸಲಹೆ ನೀಡಬೇಕೇ ಹೊರತು ವಿನಾ ಕಾರಣ ಉಪದೇಶ ಮಾಡಬಾರದು ಅಭಿಪ್ರಾಯಪಟ್ಟರು.
ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ ನಿರ್ದೇಶಕ ಬ್ರಹ್ಮಚಾರಿ ಅನಂತಾನಂದ ಚೈತನ್ಯ ಮಾತನಾಡಿ, ಸಿನೆಮಾ ಹಲವು ಕಲಾ ಪ್ರಕಾರಗಳ ಸಂಯೋಜನೆ. ಅದಕ್ಕೆ ಜನರ ಭಾವನೆಗಳನ್ನು ಸ್ಪರ್ಶಿಸುವ ಶಕ್ತಿ ಇದೆ. ಇಂತಹ ಸೃಜನಾತ್ಮಕ ಕೆಲಸಕ್ಕೆ ಏಕಾಗ್ರತೆ ತುಂಬಾ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಿರುಚಿತ್ರೋತ್ಸವದಲ್ಲಿ ಓಪನ್ ಕ್ಯಾಟಗರಿ, ಅಮೃತ ಕ್ಯಾಟಗರಿ ಮತ್ತು 60 ಅವರ್ ಚ್ಯಾಲೆಂಜ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ದೇಶಾದ್ಯಂತ ವಿವಿಧ ಭಾಷೆಗಳ ಸುಮಾರು 80 ಕಿರುಚಿತ್ರಗಳು ಸಲ್ಲಿಕೆಯಾಗಿದ್ದವು. ಆಯ್ಕೆಯಾದ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕಿರುಚಿತ್ರೋತ್ಸವದ ವಿಜೇತರ ವಿವರ: ಓಪನ್ ಕ್ಯಾಟಗರಿಯಲ್ಲಿ ಸೆಬಿನ್ ಎಸ್ (ಚಿತ್ರ: ಮನೂಷಿ), ಪರಾಗ್ ಸಾವಂತ್ (ಚಿತ್ರ: ತುಂಭಾ) ಮತ್ತು ಉದಯ್ ಬಳ್ಳಾಲ್ (ಚಿತ್ರ: ವೀಲ್ಸ್) ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಉತ್ತಮ ಚಿತ್ರಕ್ಕೆ ಪಡೆದರು. ಉತ್ತಮ ನಿರ್ದೇಶಕ - ಸೆಬಿನ್ ಎಸ್, ಉತ್ತಮ ಸಂಕಲನಕಾರ- ಎ. ನಿಶಾರ್ ಶರೀಫ್, ಉತ್ತಮ ಛಾಯಾಗ್ರಾಹಕ- ಪರಾಗ್ ಸಾವಂತ್, ಉತ್ತಮ ಚಿತ್ರಕತೆ ಬರಹಗಾರ -ಎಸ್. ಸೆಬಿನ್, ಉತ್ತಮ ನಟಿ- ಶೀಲಾ ಬಹುಮಾನ ತಮ್ಮದಾಗಿಸಿಕೊಂಡರು.
60 ಅವರ್ ಚಾಲೆಂಜ್‌ನಲ್ಲಿ ಕಾರ್ತಿಕ್ ಕೆ ಕೆ (ಚಿತ್ರ: ವ್ಯೆಹ), ಆರ್ಯ (ಚಿತ್ರ: ನಾಂದಿ), ಅಭಿನವ್ ಶ್ರೀಕಾಂತ್ (ಚಿತ್ರ: ನಿಝಲುಕಲ್) ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಉತ್ತಮ ಚಿತ್ರಕ್ಕೆ ಪಡೆದರು.
ಅಮೃತ ಕ್ಯಾಟಗರಿಯಲ್ಲಿ ಅಂಕಿತ್ ಭಾರದ್ವಾಜ್ (ಚಿತ್ರ: ಕವಿತಾ), ಎಂ.ಎಂ. ಸಂಜೀವ್ (ಚಿತ್ರ: ಜೈನ್), ಪ್ರವೀಣ್ ಕುಮಾರ್ (ಚಿತ್ರ: ಡಿಡ್) ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಉತ್ತಮ ಚಿತ್ರಕ್ಕೆ ಪಡೆದರು. ಉತ್ತಮ ನಿರ್ದೇಶಕ- ಅಂಕಿತ್ ಭಾರದ್ವಾಜ್, ಉತ್ತಮ ಸಂಕಲನಕಾರ- ಅಂಕಿತ್ ಭಾರದ್ವಾಜ್, ಉತ್ತಮ ಛಾಯಾಗ್ರಾಹಕ - ಎಸ್.ಕಿಶನ್, ಉತ್ತಮ ಚಿತ್ರಕತೆ ಬರಹಗಾರ- ಎಂ.ಎಂ. ಸಂಜೀವ್, ಉತ್ತಮ ನಟ- ಆಯುಷ್ ರಾಜೇಶ್ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಜಿ. ರವೀಂದ್ರನಾಥ್, ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು, ಶೈಕ್ಷಣಿಕ ಸಂಯೋಜಕಿ ಡಾ. ರೇಖಾ ಭಟ್, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥೆ ಡಾ. ಡಾ.ರಮ್ಯಾ ಕೆ ಪ್ರಸಾದ್ ಉಪಸ್ಥಿತರಿದ್ದರು.