- ಮಾತಂಗ ಮಹಾಪರಿಷತ್‌ನ ಅಧ್ಯಕ್ಷ ಅರಕಲವಾಡಿ ನಾಗೇಂದ್ರ ಒತ್ತಾಯ
ಹುಣಸೂರು : ರಾಜ್ಯ ಸರ್ಕಾರ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ವೇಳೆ ಒಳಮೀಸಲಾತಿ ಆಧಾರದಲ್ಲಿ ಭರ್ತಿ ಮಾಡಬೇಕೆಂದು ಮಾತಂಗ ಮಹಾಪರಿಷತ್‌ನ ಅಧ್ಯಕ್ಷ, ಚಿಂತಕ ಅರಕಲವಾಡಿ ನಾಗೇಂದ್ರ ಒತ್ತಾಯಿಸಿದರು.
ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಕುರಿತಂತೆ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸುವತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. 35 ವರ್ಷಗಳ ಸತತ ಹೋರಾಟದ ನಂತರ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ನೀಡಿದ ವರದಿಯನ್ವಯ ಒಳಮೀಸಲಾತಿಯನ್ನು ಎಲ್ಲರಿಗೂ ಒಪ್ಪಿಗೆಯಾಗುವಂತೆ ವರ್ಗೀಕರಿಸಿ ಜಾರಿಗೊಳಿಸುವತ್ತ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಚರ್ಚಿಸಿ ಅಂಗೀಕರಿಸಿ, ರಾಜ್ಯಪಾಲರಿಂದ ಅಂಕಿತ ಪಡೆದು ಇದೀಗ ಹುದ್ದೆ ಭರ್ತಿಯ ವೇಳೆ 2022ರ ಹಿಂದಿನ ಶೇ.15ರ ಪ್ರಮಾಣದ ಮೀಸಲಾತಿ ಆಧರಿಸಿ ಹುದ್ದೆ ಭರ್ತಿ ಮಾಡಲಾಗುವುದೆಂದು ಸರ್ಕಾರ ತಿಳಿಸಿರುವುದು ಶೋಷಿತರಿಗೆ ಮಾಡುತ್ತಿರುವ ಅನ್ಯಾಯದ ಪರಮಾವಧಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಒಳಮೀಸಲಾತಿಗೆ ಬದ್ದ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಗಮೋಹನದಾಸ್ ವರದಿಯನ್ನು ರಾಜಕೀಯ ಪ್ರೇರಿತರಾಗಿ ಬದಲಾಯಿಸಿತು. ಅದರಂತೆ ಎ ಗ್ರೂಪ್‌ಗೆ ಶೇ.6, ಬಿ ಗ್ರೂಪ್‌ಗೆ ಶೇ.6 ಮತ್ತು ಸಿ ಗ್ರೂಪ್‌ಗೆ ಶೇ.5ರ ಮೀಸಲಾತಿಯನ್ನು ನಿರ್ಧರಿಸಿತು. ಇದೀಗ ಧಾರವಾಡದಲ್ಲಿ ನಿರುದ್ಯೋಗಿಗಳು ನಡೆಸಿದ ಹೋರಾಟಕ್ಕೆ ಮಣಿದು ಸರ್ಕಾರ 56,432 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾದಾಗ ಬೊಮ್ಮಾಯಿ ಸರ್ಕಾರ ನಿರ್ಧರಿಸಿದ್ದ ಮೀಸಲಾತಿ ಕುರಿತಂತೆ ನ್ಯಾಯಾಲಯದಲ್ಲಿ ಪ್ರಕರಣ ಇರುವ ನೆಪವೊಡ್ಡಿ 2022ರ ಹಿಂದಿನ ಮೀಸಲಾತಿ ಶೇ.15ರನ್ವಯ ನೇಮಕಾತಿ ನಡೆಯಲಿದೆ ಎಂದು ತಿಳಿಸಿದೆ. ಶೇ.15ರ ಪ್ರಮಾಣದಲ್ಲೇ ಮೀಸಲಾತಿ ನೀಡಲಿ. ಆದರೆ ಅದರಲ್ಲೂ ಒಳಮೀಸಲಾತಿ ನಿರ್ಧರಿಸಿ ಹುದ್ದೆಗಳನ್ನು ಭರ್ತಿ ಮಾಡಬೇಕೆನ್ನುವುದು ಮಾದಿಗ ಹೋರಾಟ ಸಮಿತಿ ಒತ್ತಾಯವಾಗಿದೆ ಎಂದರು.
ಸಚಿವರು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿ ಗೊಂದಲ ಎಬ್ಬಿಸುತ್ತಿದ್ದಾರೆ. ಒಳಮೀಸಲಾತಿ ಬಿಲ್ ಕುರಿತಂತೆ ರಾಜ್ಯಪಾಲರ ಅಂಕಿತ ಬಿದ್ದ ನಂತರವೂ ಸರ್ಕಾರ ಜಾರಿಗೊಳಿಸಲು ಮೀನಮೇಷ ಎಣಿಸುತ್ತಿರುವುದೇಕೆ? ಗೊಂದಲಗಳಿಂದಾಗಿ ದಲಿತರ ನಡುವಿನ ಸಾಮರಸ್ಯವನ್ನು ಒಡೆದುಹಾಕುವ ಹುನ್ನಾರ ಕಾಣಿಸುತ್ತಿದೆ. ಸರ್ಕಾರ ಒಳಮೀಸಲಾತಿಯಡಿಯೇ ಹುದ್ದೆ ಭರ್ತಿ ಮಾಡಬೇಕು. ಈ ಕುರಿತು ಮಾ.12ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಮಾದಿಗ ಸಮಾಜದ ಬೃಹತ್ ಸಮಾವೇಶ ಆಯೋಜಿಸಿದ್ದೇವೆ. ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ಗೊಂದಲ ಸೃಷ್ಟಿಸಿದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಸುದ್ದಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಬೆಳ್ತೂರು ವೆಂಕಟೇಶ್, ಉಪಾಧ್ಯಕ್ಷ ಎಚ್.ಎಸ್.ಶಿವರಾಮು, ಹಿರಿಯ ಮುಖಂಡರಾದ ರಾಯನಹಳ್ಳಿ ಸ್ವಾಮಿ, ಅಕ್ರಮಸಕ್ರಮ ಸಮಿತಿ ಮಾಜಿ ಸದಸ್ಯ ಎಸ್.ಕಿಟ್ಟು ಹಾಜರಿದ್ದರು.