ತಿ.ನರಸೀಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ಆನ್‌ಲೈನ್ ಮೂಲಕ ನಡೆಯುತ್ತಿರುವ ಅನಧಿಕೃತ ಔಷಧ ಮಾರಾಟ ಹಾಗೂ ಮನೆ ಬಾಗಿಲಿಗೆ ಔಷಧ ವಿತರಣೆ ಸೇವೆ ನಿಯಂತ್ರಿಸುವಂತೆ ಆಗ್ರಹಿಸಿ ಔಷಧ ವ್ಯಾಪಾರಿಗಳು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪೂಜಿತ್ ಮೆಡಿಕಲ್ಸ್ ಕುಮಾರ್, ಮಧು, ಮಂಜು ಇತರರು ಇದ್ದರು.
- ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ವ್ಯಾಪಾರಸ್ಥರು
ತಿ.ನರಸೀಪುರ : ಆನ್‌ಲೈನ್ ಔಷಧ ಮಾರಾಟ ಹಾಗೂ ಮನೆ ಬಾಗಿಲಿಗೆ ಔಷಧ ವಿತರಣೆ ಸೇವೆ ನಿಯಂತ್ರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಔಷಧ ವ್ಯಾಪಾರಿಗಳು ಬುಧವಾರ ತೋಳಿಗೆ ಕಪ್ಪು ಪಟ್ಟಿ ಧರಿಸಿ, ಪ್ರತಿಭಟನೆ ನಡೆಸಿದ ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ವಿವಿಧ ಆನ್‌ಲೈನ್ ವೇದಿಕೆಗಳು ಹಾಗೂ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ವೈದ್ಯರ ಚೀಟಿ ಪರಿಶೀಲಿಸದೆ ಔಷಧಗಳನ್ನು ಮನೆ ಬಾಗಿಲಿಗೆ ನೇರವಾಗಿ ತಲುಪಿಸುತ್ತಿದ್ದಾರೆ. ಇದು ಅವೈಜ್ಞಾನಿಕ. ಕೂಡಲೇ ಈ ವ್ಯವಸ್ಥೆಯನ್ನು ತಡೆಯಬೇಕು ಎಂದು ಔಷಧ ವ್ಯಾಪಾರಿಗಳು ಆಗ್ರಹಿಸಿದರು.
ಆನ್‌ಲೈನ್ ಔಷಧ ವಿತರಣೆಯಿಂದ ಸ್ಥಳೀಯ ಪರವಾನಗಿ ಪಡೆದ ಅಂಗಡಿಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ಸರ್ಕಾರದ ಔಷಧ ಮಾರಾಟ ನಿಯಮಾವಳಿಗಳ ಉಲ್ಲಂಘನೆಯೂ ಆಗಿದೆ. ಆನ್‌ಲೈನ್‌ನಲ್ಲಿ ನಿಯಮ ಬಾಹಿರ ಔಷಧ ಮಾರಾಟ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ನಕಲಿ ಅಥವಾ ಅವಧಿ ಮೀರಿದ ಔಷಧಗಳು ಜನರಿಗೆ ತಲುಪುವ ಅಪಾಯವಿದೆ. ವೈದ್ಯರ ಸಲಹೆ ಇಲ್ಲದೆ ಔಷಧ ಬಳಕೆ ಹೆಚ್ಚಾಗಿ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಸರ್ಕಾರದ ಔಷಧ ಮಾರಾಟ ನಿಯಮಾವಳಿಗಳ ಉಲ್ಲಂಘನೆ ನಡೆಯುತ್ತಿರುವ ಅನುಮಾನ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಲ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಬಳಿಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಅವರಿಗೆ ಮನವಿ ಸಲ್ಲಿಸಿದರು. ಪೂಜಿತ್ ಮೆಡಿಕಲ್ಸ್ ಕುಮಾರ್, ಮಹದೇವ್ ಮೆಡಿಕಲ್ಸ್ ಮಧು, ಪೋಣ್ಣಪ್ಪ ಮೆಡಿಕಲ್ಸ್ ಮಂಜು ಹಾಗೂ ಸಾಗರ್ ಮೆಡಿಕಲ್ಸ್ ಆಸಿಫ್ ಇದ್ದರು.