ಕೆ.ಆರ್.ನಗರದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕಗುರು ಪೀಠದ ಶಾಖಾ ಮಠದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಶ್ರೀ ಶಿವಾನಂದ ಪುರಿ ಸ್ವಾಮೀಜಿ, ಚೀರ‌್ನಹಳ್ಳಿ ಉಮೇಶ್, ಎಚ್.ಡಿ.ಚಿಕ್ಕೇಗೌಡ, ಭಾಸ್ಕರ್, ಜಿ.ಆರ್.ದೇವರಾಜೇಗೌಡ, ಜಿ.ಎ.ನಾಗರಾಜು, ಜಿ.ಬಿ.ಸ್ವಾಮಿ, ಡಿ.ಮಂಜು, ಜಿ.ಕೆ.ರೇವಣ್ಣ, ಡಿ.ಟಿ.ಕುಮಾರ್, ಚಿಕ್ಕೇಗೌಡ ಇದ್ದರು.
ಕೆ.ಆರ್.ನಗರ: ದೊಡ್ಡಸ್ವಾಮೇಗೌಡ ಅವರು ಎಂದೂ ಅಧಿಕಾರದ ಹಿಂದೆ ಬಿದ್ದವರಲ್ಲ. ನಮ್ಮ ಸಮುದಾಯದ ನಾಯಕರ ಜತೆ ಇದ್ದು ಅವರಿಗೆ ರಾಜಕೀಯ ಸ್ಥಾನಮಾನ ಕೊಡಿಸುವಲ್ಲಿ ಶ್ರಮಿಸಿದರು ಎಂದು ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕಗುರು ಪೀಠ ಶಾಖಾ ಮಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ಶಾಖಾ ಮಠದಲ್ಲಿ ಭಾನುವಾರ ಶ್ರೀ ಸಂಗೊಳ್ಳಿ ರಾಯಣ್ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಎಂಸಿಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮುದಾಯದ ನಾಯಕರಾದ ಎಚ್.ವಿಶ್ವನಾಥ್ ಅವರ ಜತೆಯಲಿದ್ದು ಶಾಸಕ, ಸಚಿವ, ಸಂಸದರನ್ನಾಗಿ ಮಾಡಲು ದುಡಿದಿದ್ದ ದೊಡ್ಡಸ್ವಾಮೇಗೌಡರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜಕೀಯದಲ್ಲಿ ಏಳು ಬೀಳುಗಳನ್ನು ಕಂಡರೂ ಎದೆಗುಂದದೆ ಕಾರ್ಯಕರ್ತರು ಮತ್ತು ಸಮಾಜದವರ ಬೆನ್ನಿಗೆ ನಿಂತು ಪಕ್ಷ ಕಟ್ಟುವ ಕೆಲಸ ಮಾಡಿದರ ಫಲವಾಗಿ ಎಲ್ಲ ಸಮುದಾಯಗಳ ಸಹಕಾರದಿಂದ ಡಿ.ರವಿಶಂಕರ್ ಅವರನ್ನು ಶಾಸಕರಾಗಿ ಮಾಡಿದರು. ಯಾವುದೇ ಕಳಂಕ, ಕಪ್ಪುಚುಕ್ಕಿ ಇಲ್ಲದೆ ವ್ಯಕ್ತಿಗೆ ಶಾಸಕ ಸ್ಥಾನ ಸಿಗಲಿಲ್ಲ ಎಂಬ ಕೊರುಗು ನಮ್ಮ ಸಮಾಜಕ್ಕಿತ್ತು. ಈಗ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ಸಿಕ್ಕಿರುವುದು ನಮ್ಮೆಲ್ಲರಿಗೂ ಸಂತಸ ತರಿಸಿದೆ ಎಂದರು.
ಹಿಂದೆ ನನಗೆ ಸ್ವಾಮೀಜಿಯಾಗಿ ದೀಕ್ಷೆ ಕೊಡದಿರುವ ಸಂದರ್ಭದಲ್ಲಿ ದೊಡ್ಡಸ್ವಾಮೇಗೌಡರೇ ನಮ್ಮ ದೊಡ್ಡ ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ನನಗೆ ದೀಕ್ಷೆ ಕೊಡಿಸಿದರು. ಎಲ್ಲರನ್ನು ದೊಡ್ಡವರನ್ನಾಗಿ ಮಾಡಿ ಅವರು ಮಾತ್ರ ಚಿಕ್ಕವರಾಗಿಯೇ ಇದ್ದಾರೆ. ಹಗಲಿರುಳು ಎನ್ನದೆ ಕ್ಷೇತ್ರದ ಅಭಿವೃದ್ಧಿಗೆ ಶಾಸಕರೊಂದಿಗೆ ಶ್ರಮಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದರು.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಮಾತನಾಡಿ, ನಿಮ್ಮೆಲ್ಲರ ಆರ್ಶೀವಾದದಿಂದ ನಾವೆಲ್ಲ ಬೆಳೆದಿದ್ದು ರವಿಶಂಕರ್ ಶಾಸಕರಾಗಲು ಎಲ್ಲರ ಸಂಘಟಿತ ಹೋರಾಟ ಕಾರಣವಾಗಿದೆ. ಎರಡೂವರೆ ವರ್ಷಗಳಿಂದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ಇತ್ತೀಚೆಗೆ ವಿರೋಧ ಪಕ್ಷದವರು ಅಪಪ್ರಚಾರ ಮಾಡಿ ಮತದರಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ತಕ್ಕ ಉತ್ತರ ನೀಡಲಿದ್ದೇವೆ ಎಂದರು.
ಸರ್ಕಾರಿ ನೌಕರರ ಸಂಘದ ಪ್ರಭಾರ ಅಧ್ಯಕ್ಷ ಚೀರ‌್ನಹಳ್ಳಿ ಉಮೇಶ್, ಸಂಘದ ಅಧ್ಯಕ್ಷ ಎಚ್.ಡಿ.ಚಿಕ್ಕೇಗೌಡ, ಗೌರವಾಧ್ಯಕ್ಷ ಬ್ಯಾಡರಹಳ್ಳಿ ಭಾಸ್ಕರ್, ಜಿ.ಆರ್.ದೇವರಾಜೇಗೌಡ, ಜಿ.ಎ.ನಾಗರಾಜು, ಪ್ರಧಾನ ಕಾರ್ಯದರ್ಶಿ ಜಿ.ಬಿ.ಸ್ವಾಮಿ, ಖಜಾಂಚಿ ಡಿ.ಮಂಜು, ಉಪಾಧ್ಯಕ್ಷ ಜಿ.ಕೆ.ರೇವಣ್ಣ, ಸಹಕಾರ್ಯದರ್ಶಿ ಡಿ.ಟಿ.ಕುಮಾರ್, ಸಂಘಟನಾ ಕಾರ್ಯದರ್ಶಿ ಚಿಕ್ಕೇಗೌಡ, ಪ್ರಧಾನ ಪೋಷಕ ಮಂಜುರಾಜ್, ಮಾದೇಗೌಡ, ನಿರ್ದೇಶಕರಾದ ಜಿ.ಜೆ.ಹೇಮಂತ್‌ಕುಮಾರ್, ಎನ್.ರಾಜು, ಪ್ರಮೀಳಾ, ಲೋಕೇಶ್ ಇದ್ದರು.