ಪಿರಿಯಾಪಟ್ಟಣ ತಾಲೂಕು ದೊಡ್ಡಬೇಲಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದನೇ ತರಗತಿಗೆ ಆಗಮಿಸಿದ ಮಕ್ಕಳನ್ನು ಗುರುವಾರ ಸ್ವಾಗತಿಸಲಾಯಿತು. ಮುಖ್ಯ ಶಿಕ್ಷಕ ನಾಗೇಂದ್ರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಯ್ಯ ದಾನಿ ನಟರಾಜ್, ಸಿಆರ್‌ಪಿ ವಸಂತ್ ಕುಮಾರ್ ಶಿಕ್ಷಕರಾದ ನಿಖಿಲ್, ರೇಣುಕಮ್ಮ, ವಸಂತಿ ಇತರರು ಹಾಜರಿದ್ದರು. 
ಮೈಸೂರು

1ನೇ ತರಗತಿ ಮಕ್ಕಳ ಹೆಸರಿನಲ್ಲಿ ಎಫ್‌ಡಿ

ಎ. ಆರ್. ರಘುರಾಮ
ರಾವಂದೂರು: ದೊಡ್ಡಬೇಲಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ದಾಖಲಾದ 15 ವಿದ್ಯಾರ್ಥಿಗಳಿಗೆ ತಲಾ 1,000 ರೂ. ಗಳನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಫಿಕ್ಸೆಡ್ ಇಡುವ ಮೂಲಕ ಬರಮಾಡಿಕೊಳ್ಳುವ ವಿನೂತನ ಕಾರ್ಯಕ್ರಮ ಗಮನ ಸೆಳೆದಿದೆ. ಪಿರಿಯಾಪಟ್ಟಣ ತಾಲೂಕು ದೊಡ್ಡಬೇಲಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು ಎಂದು ಮುಖ್ಯ ಶಿಕ್ಷಕ ನಾಗೇಂದ್ರ ಅವರು ಈ ಯೋಜನೆ ರೂಪಿಸುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ. ಇವರ ವಿಶೇಷ ಯೋಜನೆಗರೆ ಅವಿರತ ಶ್ರಮವನ್ನೂ ಹಾಕಿದ್ದಾರೆ. ದಾನಿಗಳನ್ನು ಸಂಪರ್ಕಿಸಿ, ಒಂದನೇ ತರಗತಿಗೆ ಹೊಸದಾಗಿ ಸೇರ್ಪಡೆಯಾಗುವ ವಿದ್ಯಾರ್ಥಿ ಹೆಸರಿನಲ್ಲಿ 1,000 ರೂ. ಎಫ್‌ಡಿ ಮಾಡಿ, ಅದರ ಬಾಂಡ್ ಅನ್ನು ವಿದ್ಯಾರ್ಥಿಗೆ ನೀಡುವ ಮೂಲಕ ಸ್ವಾಗತಿಸಿದ್ದಾರೆ.
ಗುರುವಾರ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ನಾಗೇಂದ್ರ,
ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಲಭ್ಯವಿದೆ. ಪಾಲಕರು ಯಾವುದೇ ಕಾರಣಕ್ಕೂ ಖಾಸಗಿ ಶಾಲಾ ಶಿಕ್ಷಣದತ್ತ ಮುಖ ಮಾಡದೇ ಮಕ್ಕಳನ್ನು ಸರ್ಕಾರಿಗೆ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ದಾಖಲಾದ 15 ವಿದ್ಯಾರ್ಥಿಗಳ ಪಾಲಕರಿಗೆ ಎಫ್‌ಡಿ ಬಾಂಡ್ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಎಷ್ಟೇ ಮಕ್ಕಳು ದಾಖಲಾದರೂ ಅವರಿಗೆ ಈ ಸೌಲಭ್ಯ ದೊರಕಲಿದೆ. 7 ವರ್ಷದ ನಂತರ ಪಾಲಕರು ಎಫ್‌ಡಿ ಹಣವನ್ನು ಪಾವತಿ ಮಾಡಿಕೊಳ್ಳಬಹುದು. ಹೈಸ್ಕೂಲ್ ಶಿಕ್ಷಣಕ್ಕೆ ಈ ಮೊತ್ತ ನೆರವಾಗಲಿ ಎಂಬ ಉದ್ದೇಶ ನಮ್ಮದಾಗಿದೆ ಎಂದು ಅವರು ವಿವರಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೋಮಯ್ಯ ದಾನಿಗಳಾದ ಬಂಕ್ ನಟರಾಜ್, ಗೋಪಾಲ್ ರಾಜ ಅರಸ್ ಕುಟುಂಬದ ಸದಸ್ಯರು, ಸಿಆರ್‌ಪಿ ವಸಂತ್ ಕುಮಾರ್ ಶಿಕ್ಷಕರಾದ ನಿಖಿಲ್, ರೇಣುಕಮ್ಮ, ವಸಂತಿ ಇತರರು ಹಾಜರಿದ್ದರು.