- ನಂಜನಗೂಡು ತಾಲೂಕಿನ ಇಮ್ಮಾವು, ಕೋಚನಹಳ್ಳಿಯ ಗ್ರಾಮದ ರೈತರಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂಬ ಆಗ್ರಹ
- ಇಮ್ಮಾವು ಗ್ರಾಮದ ಸರ್ವೇ ಸಂಖ್ಯೆ 390ರಿಂದ 430ರ ವರೆಗಿನ ಜಮೀನಿನ ನೈಜ ಗೇಣಿದಾರರಿಗೆ ಪರಿಹಾರ ಪಾವತಿಸಬೇಕು
- ಕಾನೂನುಬಾಹಿರವಾಗಿ ಪರಿಹಾರ ಪಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು
ಮೈಸೂರು: ನಂಜನಗೂಡು ತಾಲೂಕಿನ ಇಮ್ಮಾವು, ಕೋಚನಹಳ್ಳಿಯ ಗ್ರಾಮದ ರೈತರಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದಾರೆ
ಮೈಮುಲ್ ಹಾಲಿನ ಡೇರಿ ಪಕ್ಕದಲ್ಲಿರುವ ಬುದ್ಧ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಇಮ್ಮಾವು ಗ್ರಾಮದ ಸರ್ವೇ ಸಂಖ್ಯೆ 390ರಿಂದ 430ರ ವರೆಗಿನ ಜಮೀನಿನ ನೈಜ ಗೇಣಿದಾರರಿಗೆ ಪರಿಹಾರ ಪಾವತಿಸಬೇಕು. ಕಾನೂನುಬಾಹಿರವಾಗಿ ಪರಿಹಾರ ಪಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಿಕ್ಕಯ್ಯನ ಛತ್ರ ಹೋಬಳಿಯ ಇಮ್ಮಾವು ಗ್ರಾಮಕ್ಕೆ ಸೇರಿದ ಸುಮಾರು 500 ಎಕರೆಗೂ ಹೆಚ್ಚು ಸರ್ಕಾರಿ ಜಮೀನಿನಲ್ಲಿ ಕಳೆದ 70-80 ವರ್ಷದಿಂದ ಗೇಣಿದಾರರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದರು. ಆದರೆ ಈ ಜಮೀನಿನ ಜಾಗವನ್ನು ಕೈಗಾರಿಕೆ ನಿರ್ಮಾಣ ಉದ್ದೇಶಕ್ಕಾಗಿ 2008ರಲ್ಲಿ ಸರ್ಕಾರ ಭೂಸ್ವಾಧೀನಪಡಿಸಿಕೊಂಡಿದೆ.
ಇದಕ್ಕೆ ಪ್ರತಿಯಾಗಿ ಎಕರೆಗೆ 21 ಲಕ್ಷ ರೂ. ಪರಿಹಾರ ನಿಗದಿಪಡಿಸಿ ಪಾವತಿಸಲಾಗಿದೆ. ಸರ್ಕಾರಿ ಬಿ ಖರಾಬಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ 18 ಕೋಟಿ ರೂ. ಬಿಡುಗಡೆ ಮಾಡಿ ನಿಜವಾದ ಸಾಗುವಳಿದಾರರಿಗೆ ಪರಿಹಾರ ಪಾವತಿಸಿಲ್ಲ. ಬೇರೆಯವರಿಗೆ ಪರಿಹಾರದ ಹಣ ನೀಡಲಾಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.
ಈ ಅನ್ಯಾಯ ವಿರೋಧಿಸಿ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ. ಜತೆಗೆ ಜಿಲ್ಲಾಧಿಕಾರಿ ಕಚೇರಿ ಎದುರು 2 ಸಲ ಧರಣಿ ಮಾಡಿದರೂ ನ್ಯಾಯ ಸಿಕ್ಕಿರಲಿಲ್ಲ.
ಕೆಐಎಡಿಬಿ ಕಚೇರಿ ಎದುರು ಫೆ.2ರಂದು ಅನಿರ್ದಿಷ್ಟ ಚಳವಳಿ ನಡೆಸಿದ ಪರಿಣಾಮ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು.
ಆದರೆ ಇದು ಹುಸಿಯಾಗಿದೆ. ಆದ್ದರಿಂದ ಅನಿರ್ದಿಷ್ಟ ಕಾಲ ಧರಣಿ ಕೈಗೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರೇಮ್ ರಾಜ್, ತಾಲೂಕು ಯುವ ಘಟಕದ ಅಧ್ಯಕ್ಷ ಮೈದನಹಳ್ಳಿ ಮಹೇಶ್, ಕೋಚನಹಳ್ಳಿ, ಇಮ್ಮಾವು ರೈತರು ಹಾಗೂ ಮಹಿಳೆಯರು ಇದ್ದರು.