ರೈತರಿಗೆ ಮುಖವಾಡಗಳನ್ನು ವಿತರಿಸಿದ ಅರಣ್ಯ ಇಲಾಖೆ ಸಿಬ್ಬಂದಿ. 
ಮೈಸೂರು

ಹುಲಿ ದಾಳಿ ತಡೆಯಲು ರೈತರಿಗೆ ‘ಮುಖವಾಡ’

ಪ್ರಮುಖ ಮುಖ್ಯಾಂಶಗಳು

  • ತಲೆ ಹಿಂಭಾಗ ಧರಿಸಿದರೆ ವಾಘ್ರೃ ಆಕ್ರಮಣ ಮಾಡದೆಂಬ ನಂಬಿಕೆ
  • 10 ಸಾವಿರ ಮುಖವಾಡ ವಿತರಣೆಗೆ ಮುಂದಾದ ಅರಣ್ಯ ಇಲಾಖೆ
  • ಅ.16ರಿಂದ ನ.7ರವರೆಗೆ ನಾಲ್ವರು ರೈತರ ಮೇಲೆ ಹುಲಿಗಳು ದಾಳಿ ಮಾಡಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದಾರೆ
ಮೈಸೂರು: ಮೈಸೂರು ಹಾಗೂ ಚಾಮರಾಜನಗರ ಸೇರಿ ರಾಜ್ಯದಲ್ಲಿ ಹುಲಿ ಮತ್ತು ಮಾನವನ ನಡುವಿನ ಸಂಘರ್ಷ ಮಿತಿ ಮೀರಿದೆ. ಇದರಿಂದ ಕಾಡು ಪ್ರಾಣಿ ಹಾಗೂ ಮಾನವ ಪ್ರಾಣ ಹಾನಿಯೂ ಹೆಚ್ಚಾಗಿದೆ.
ಇತ್ತೀಚಿನ ದಿನಗಳಲ್ಲಿ ಹುಲಿ ಮತ್ತು ಮಾವನ ಸಂಘರ್ಷ ತಾರಕಕ್ಕೇರಿದ್ದು, ನಿಯಂತ್ರಣಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ಪಶ್ಚಿಮ ಬಂಗಾಳದ ಸುಂದರ್‌ಬನ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಿದ್ದ ಈ ಪ್ರಯೋಗವನ್ನು ಇಲ್ಲೂ ಕಾರ್ಯ ರೂಪಕ್ಕೆ ತಂದಿದೆ. ರೈತರಿಗೆ ಕಾಡಂಚಿನ ರೈತರಿಗೆ ಮುಖವಾಡ ವಿತರಿದೆ. ಜಿಲ್ಲೆಯ ನುಗು ವನ್ಯಜೀವಿ ಧಾಮ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ತಡೆಯಲು ಅರಣ್ಯ ಇಲಾಖೆಯು ರೈತರಿಗೆ 10 ಸಾವಿರ ಮುಖವಾಡಗಳನ್ನು ವಿತರಿಸಿದೆ.

ರೈತರನ್ನು ರಕ್ಷಿಸಲು ಈ ಕ್ರಮ

ಕಾಡಂಚಿನ ಜಮೀನುಗಳಲ್ಲಿ ರೈತರ ಮೇಲೆ ಹುಲಿ ದಾಳಿ ಹಿನ್ನೆಲೆಯಲ್ಲಿ ರೈತರನ್ನು ರಕ್ಷಿಸಲು ಈ ಕ್ರಮ ವಹಿಸಿದ್ದು, ಮುಖವಾಡವನ್ನು ಕತ್ತು ಹಾಗೂ ತಲೆ ಹಿಂಭಾಗ ಸೇರಿದಂತೆ ಧರಿಸಿದರೆ, ಹುಲಿಗಳು ದಾಳಿ ನಡೆಸಲು ಹಿಂಜರಿಯುತ್ತವೆ ಎಂಬ ತಜ್ಞರ ಸಲಹೆಯನ್ನು ಪರಿಗಣಿಸಿದೆ.
ಅ.16ರಿಂದ ನ.7ರವರೆಗೆ ನಾಲ್ವರು ರೈತರ ಮೇಲೆ ಹುಲಿಗಳು ದಾಳಿ ಮಾಡಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದರು. ಮುಖವಾಡ ವಿತರಣೆ ಕ್ರಮದಿಂದ, ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಬರಲಿದೆ ಎಂಬುದು ಇಲಾಖೆಯ ನಂಬಿಕೆ.

20 ಹುಲಿಗಳ ಓಡಾಟ ಗುರುತು

ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಿರುವ ಎಚ್.ಡಿ.ಕೋಟೆ, ಸರಗೂರು ಹಾಗೂ ನಂಜನಗೂಡು ತಾಲೂಕುಗಳ ಕಾಡಂಚಿನಲ್ಲಿ 20 ಹುಲಿಗಳ ಓಡಾಟವನ್ನು ಗುರುತಿಸಲಾಗಿದೆ. ಹುಲಿಗಳ ಸಂತಾನೋತ್ಪತ್ತಿ ಸಮಯವಾಗಿರುವುದರಿಂದ ಸಂಗಾತಿಗಳ ಹುಡುಕಾಟದಲ್ಲಿವೆ. ಮರಿ ಹಾಕಿರುವ ತಾಯಿ ಹುಲಿಗಳೂ ಇವೆ. ಹೀಗಾಗಿ, ಎದುರು ಸಿಗುವ ರೈತರ ಮೇಲೆ ದಾಳಿ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಫಾರಿ ರದ್ದಾಗಿರುವುದರಿಂದ ಅಲ್ಲಿನ ಸಿಬ್ಬಂದಿಯನ್ನು ಮುಖವಾಡ ವಿತರಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಹುಲಿಯು ಕತ್ತನ್ನು ಹಿಡಿಯುವುದರಿಂದ ತಲೆ ಹಿಂಭಾಗಕ್ಕೆ ಮುಖವಾಡ ಧರಿಸಿದರೆ ದಾಳಿ ಮಾಡಲು ಮುಂದಾಗದು. ಪಶ್ಚಿಮ ಬಂಗಾಳದ ಸುಂದರ್‌ಬನ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಿದ್ದ ಈ ಪ್ರಯೋಗವು ಯಶ ಕಂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.