ಸರಗೂರು ತಾಲೂಕಿನ ತಹಸೀಲ್ದಾರ್ ಕಚೇರಿಯ ಹೊರನೋಟ.
- ಗೋಮಾಳ, ಹುಲ್ಲುಗಾವಲು ಜಮೀನು
- ಹಂಗಾಮಿಯಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ
ಸರಗೂರು; ಗೋಮಾಳ, ಹುಲ್ಲುಗಾವಲು ಜಮೀನುಗಳಲ್ಲಿ ಹಂಗಾಮಿಯಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ ಬಗರ್‌ಹುಕುಂ ಮೂಲಕ ಸಕ್ರಮಗೊಳಿಸಲು ಸಮಿತಿ ಇನ್ನೂ ಕಾರ್ಯಾರಂಭಗೊಳ್ಳದ ಹಿನ್ನೆಲೆಯಲ್ಲಿ ರೈತರು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.
ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿರುವ ರೈತರು ಈಗಾಗಲೇ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದು, ಇದನ್ನು ತಮ್ಮ ಹೆಸರಿಗೆ ಮಂಜೂರು ಕೋರಿ ನಮೂನೆ 53 ಹಾಗೂ 57ರಲ್ಲಿ ಮೂಲಕ ಅರ್ಜಿ ಹಾಕಿಕೊಂಡಿದ್ದಾರೆ. ಸರಗೂರು ಹೋಬಳಿಯಲ್ಲಿ ಸುಮಾರು ಗ್ರಾಮಗಳ ರೈತರು ಸಾಗುವಾಳಿ ಪತ್ರಗಳಿಗೆ ಕಿಮ್ಮತ್ತು ಕಟ್ಟಿದರೂ ಈ ಜಮೀನು ಅರಣ್ಯಕ್ಕೆ ಬರುತ್ತದೆ ಎಂದು ಕಂದಾಯ ಇಲಾಖೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎನ್ನುತ್ತಾರೆ ತಹಸೀಲ್ದಾರ್.
ಈ ಸಂಬಂಧ 400 ರಿಂದ 600 ಅರ್ಜಿಗಳು ವಿಲೇವಾರಿ ಆಗಬೇಕಿದೆ. ತಾಲೂಕು ಮಟ್ಟದಲ್ಲಿ ದರಖಾಸ್ತು ಸಮಿತಿ ಮೂಲಕ ರೈತರಿಗೆ ಸಾಗುವಳಿ ಪತ್ರ ನೀಡುವುದು ನಿಯಮ. ಆದರೆ ಕರ್ನಾಟಕ ಭೂ ಕಂದಾಯ 1966ನಿಯಮ 108(ಇ)ಅನ್ವಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ದರಖಾಸ್ತು ಸಮಿತಿ ರಚನೆಯಾಗಬೇಕೆಂಬುದು ಸರ್ಕಾರದದ ಉದ್ದೇಶ. ಆದರೆ ಇಲ್ಲಿ ಸಮಿತಿ ಇದ್ದರೂ ಕಾರ್ಯಾರಂಭ ಮಾಡದಿರುವುದರಿಂದ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಹೋಬಳಿಯ ಲಂಕೆ, ಚಕ್ಕೂರು, ಮುಳ್ಳೂರು, ಎಂ.ಸಿ ತಳಲು, ಬಿ ಮಟಕರೆ, ಕುಂದೂರು ವೃತ್ತಗಳಲ್ಲಿ ಗೋಮಾಳ ಮತ್ತು ಅರಣ್ಯ ಪ್ರದೇಶ ಸಮನಾಗಿದೆ. ಗೋಮಾಳ ಮತ್ತು ಅರಣ್ಯ ಒಂದೇ ಕಡೆ ಇರುವುದರಿಂದ ಮಂಜೂರು ವಿಚಾರದಲ್ಲಿ ಸ್ಥಳ ತನಿಖೆ ಅತ್ಯಗತ್ಯ. ಕುಂದೂರು ಹಾಗೂ ಲಂಕೆ ಗ್ರಾಮದ ಸರ್ವೇ ನಂ. 32ರಲ್ಲಿ ಅರಣ್ಯ ಮತ್ತು ಗೋಮಾಳ ಜಮೀನು ಒಂದೇ ಸರ್ವೇ ನಂ. ಆಗಿರುವುದರಿಂದ ರೈತರು ಯಾವ ಸ್ಥಳದಲ್ಲಿ ಸಾಗುವಳಿ ಮಾಡುತ್ತಿದ್ದಾರೆ ಎಂಬುದು ತನಿಖೆ ನಂತರವೇ ತಿಳಿಯಬೇಕಿದೆ.
ಈ ಹಿಂದೆ ಸರ್ವೇ ನಂ. 32ಕ್ಕೆ ಸಾಗುವಳಿ ಚೀಟಿ ನೀಡಿದ್ದರಿಂದ ಈಗಾಗಲೇ ರೈತರು ಮತ್ತು ಅರಣ್ಯ ಇಲಾಖೆ ಸ್ವಾಧೀನದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ನಿರ್ದಿಷ್ಟ ಗೋಮಾಳದಲ್ಲಿರುವ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಇನ್ನು ಸಾಗುವಳಿ ಪತ್ರ ಇಲ್ಲದೆ ಯಾವುದೇ ಸೌಲಭ್ಯ ಪಡೆಯಲು ಅವಕಾಶವಿಲ್ಲ. ಈ ಕುರಿತು ಸಾಗುವಳಿದಾರರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಡೆಯುತ್ತಿದೆ ಜಂಟಿ ಸರ್ವೇ ಕಾರ್ಯ
ಹಂಗಾಮಿ ಸಾಗುವಳಿಯನ್ನು ಮಂಜೂರು ಮಾಡುವ ಅಧಿಕಾರ ದರಖಾಸ್ತು ಸಮಿತಿಗೆ ಇದೆ. ಇದಕ್ಕೆ ಸ್ಥಳೀಯ ಶಾಸಕರು ಅಧ್ಯಕ್ಷರಾಗಿರುತ್ತಾರೆ. ತಾಲೂಕಿನಲ್ಲಿ ಈಗಾಗಲೇ ಸುಮಾರು ಸಾಗುವಳಿ ಪತ್ರ ರೈತರಿಗೆ ನೀಡಲಾಗಿದೆ. ಉಳಿದ 53, 57 ರ ನಮೂನೆಯಲ್ಲಿ ರೈತರು ಸಾಗುವಾಳಿ ಪತ್ರ ಸಲ್ಲಿಸಿದ್ದು, ಅದು ಅರಣ್ಯ ಇಲಾಖೆಗೆ ಒಳಪಡುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ಕಂದಾಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಸರ್ವೇ ಕಾರ್ಯ ಮಾಡುತ್ತಿದ್ದಾರೆ. ಅರಣ್ಯಕ್ಕೆ ಒಳಪಡುವುದಿಲ್ಲ ಎಂದು ಎನ್‌ಒಸಿ ಬಂದಿರುವವರಿಗೆ ಕಿಮ್ಮತ್ತು ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಗ್ರಾಪಂಗಳಲ್ಲಿ ಸಾಗುವಳಿ ವಿಚಾರದ ಬಗ್ಗೆ ರೈತರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ.
ಮೋಹನಕುಮಾರಿ ತಹಸೀಲ್ದಾರ್, ಸರಗೂರು
ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ರೈತರಿಗೆ ಹಕ್ಕು ಪತ್ರ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶವಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. 1978ರ ಏ.27ಕ್ಕಿಂತ ಹಿಂದೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ನೀಡುವಂತೆ ಆದೇಶ ಮಾಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 1996ರಲ್ಲಿ 43 ಸಾವಿರ ಎಕರೆ ಭೂಮಿಯನ್ನು ಬಿಡುಗಡೆ ಮಾಡಿದೆ. ತಾಲೂಕಿನಲ್ಲಿ 900 ರೈತರು ಅರ್ಜಿ ಸಲ್ಲಿಸಿದ್ದರೂ, ರೈತರನ್ನು ಕಚೇರಿಗೆ ಅಲೆದಾಡುವ ಸ್ಥಿತಿ ಇನ್ನೂ ಇದೆ.
ಸರಗೂರು ಕೃಷ್ಣ ಸಂಚಾಲಕ, ಸರಗೂರು ಅಭಿವೃದ್ಧಿ ಹೋರಾಟ ಸಮಿತಿ
ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿ ಪತ್ರ, ಕಂದಾಯ ಇಲಾಖೆ ವತಿಯಿಂದ ಎನ್‌ಒಸಿ ಪಡೆಯಲು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಬೇಕು. ಸರ್ವೇ ನಡೆಸಿದರೆ ಅರಣ್ಯ ಇಲಾಖೆಗೆ ಒಳಪಡುತ್ತದೆ. ಈ ನೋವನ್ನು ನಾವು ಯಾರಿಗೆ ಹೇಳಬೇಕು. ನಮ್ಮ ಸಮಸ್ಯೆಯನ್ನು ಶಾಸಕರಿಗೆ ಹೇಳಿದರೆ ಅರಣ್ಯ ಸಚಿವರ ಜತೆ ಮಾತನಾಡುತ್ತಾನೆ ಎನ್ನುತ್ತಾರೆ. ಇಲ್ಲವಾದರೆ ಅಧಿಕಾರಿಗಳಿಗೆ ಹೇಳುತ್ತಾರೆ. ಯಾರೇ ಅಧಿಕಾರಿಗಳು ಬಂದರೂ ನಮ್ಮ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿಲ್ಲ.
ಸುಧೀರ್‌ಗೌಡ ಹೆಗ್ಗೂನೂರು ಅಧ್ಯಕ್ಷ, ಒಕ್ಕಲಿಗರ ಸಂಘ
2022-23ನೇ ಸಾಲಿನಲ್ಲಿ ಸಾಗುವಳಿ ಪತ್ರ ಪಡೆಯಲು ನಮ್ಮಿಂದ ಕಿಮ್ಮತ್ತು ಕಟ್ಟಿಸಲಾಗಿದೆ. ಆದರೆ ಇದೀಗ ಅರಣ್ಯ ಇಲಾಖೆಯಿಂದ ಎನ್‌ಒಸಿ ತಂದರೆ ಮಾತ್ರ ಸಾಗುವಳಿ ಪತ್ರ ವಿತರಣೆ ಮಾಡಲಾಗುವುದು ಎಂದು ಕಂದಾಯ ಅಧಿಕಾರಿಗಳು ಹೇಳುತ್ತಿದ್ದಾರೆ. ನಾವು ತಾತಾ-ತಂದೆ ಕಾಲದಿಂದಲೂ ಜಮೀನು ಮಾಡಿಕೊಂಡು ಬಂದಿದ್ದೇವೆ. ನಮ್ಮದು ಎಂದು ಹೇಳಿಕೊಳ್ಳಲು ಮಾತ್ರ ಜಮೀನು. ಇದರಿಂದ ನಾವು ಬೇಸತ್ತಿದ್ದು, ನಮಗೆ ಸಾಗುವಳಿ ಪತ್ರ ಬೇಡ. ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೇ ಅವರ ಹೆಸರಿಗೆ ಮಾಡಿಕೊಳ್ಳಲಿ.
ಚಿನ್ನಸ್ವಾಮಿ ಗ್ರಾಪಂ ಮಾಜಿ ಸದಸ್ಯ, ದಡದಹಳ್ಳಿ
ತಹಸೀಲ್ದಾರ್ ಕಚೇರಿಯಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಲಾಗಿದೆ. ಶಾಸಕರ ಬೆಂಬಲಿಗರಿಗೆ ಮಾತ್ರ ಸಾಗುವಳಿ ಪತ್ರ ವಿತರಣೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಉಳಿದಂತೆ ಬೇರೆ ರೈತರಿಗೆ ಯಾರು ಸಾಗುವಳಿ ಪತ್ರ ನೀಡುತ್ತಾರೆ. ಎಷ್ಟೋ ರೈತರು ಜಮೀನು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಜತೆ ಗಲಾಟೆ ಮಾಡಿಕೊಂಡಿದ್ದಾರೆ.ಇನ್ನೂ ಸಂಘರ್ಷ ನಡೆಯುತ್ತಿದೆ.
ಮಹೇಂದ್ರ ಹೂವಿನಕೊಳ ತಾಲೂಕು ಪ್ರಧಾನ ಕಾರ್ಯದರ್ಶಿ, ಜೆಡಿಎಸ್
ಜಂಟಿ ಸರ್ವೇ ಮಾಡಬೇಕೆಂದು ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ತಿಳಿಸಿದ್ದೇವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಇವರು ಬಂದರೆ ಅವರು ಬರುವುದಿಲ್ಲ. ಜಮೀನಿನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದು ಯಾವುದೋ ಜಮೀನು ಸರ್ವೇ ಮಾಡಿಕೊಂಡು ಹೋಗುತ್ತಿದ್ದಾರೆ. ನಾವುಗಳು ಕೇಳುವುದಕ್ಕೆ ಹೋದರೆ ಸರ್ವೇ ಮಾಡಲಾಗಿದೆ ಎನ್ನುತ್ತಾರೆ. ಆದರೆ ಅಲ್ಲಿ ಸರ್ವೇ ನಂಬರ್ ತಪ್ಪು ಇರುತ್ತದೆ. ಇಲ್ಲವಾದರೆ ಜಮೀನುದಾರರ ಹೆಸರು ತಪ್ಪಿರುತ್ತದೆ. ಈ ಸಂಬಂಧ ನ್ಯಾಯಾಲಯ ಹಾಗೂ ಜಿಲ್ಲಾ ಕಚೇರಿಗೆ ಹೋಗುವ ಪರಿಸ್ಥಿತಿ ಇದೆ.
ಬಿ.ಶಿವಣ್ಣ ಗ್ರಾಪಂ ಮಾಜಿ ಅಧ್ಯಕ್ಷ, ಉಯ್ಯಂಬಳಿ
ಅರಣ್ಯ ಸಚಿವರಿಗೆ ಮನವಿ ಸಲ್ಲಿಕೆ
ಬಂಡೀಪುರ ಅರಣ್ಯ ಪ್ರದೇಶಕ್ಕೆ ಒಳಪಡುವ ಜಮೀನನ್ನು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ಮಾಡಬೇಕು ಎಂದು ಅರ್ಜಿ ನೀಡಲಾಗಿದೆ. ಹೆಡಿಯಾಲ, ನುಗು, ಮೊಳೆಯೂರು ವಲಯ ವ್ಯಾಪ್ತಿಗೆ ಒಳಪಡುವ ಜಮೀನನ್ನು ಸರ್ವೇ ಮಾಡಿ ಅದರಲ್ಲಿ ಅರಣ್ಯಕ್ಕೆ ಒಳಪಡುತ್ತದೆಯೇ ಅಥವಾ ಇಲ್ಲವಾ ಎಂದು ತಿಳಿಸುವಂತೆ ಕಂದಾಯ ಇಲಾಖೆಗೆ ಈಗಾಗಲೇ ಮನವಿ ಮಾಡಲಾಗಿದೆ. ಅರಣ್ಯ ಇಲಾಖೆಗೆ ಒಳಪಡುವ ಜಮೀನುಗಳ ವರದಿಯನ್ನು ಅರಣ್ಯ ಸಚಿವರು ಹಾಗೂ ಕೇಂದ್ರ ಇಲಾಖೆಗೆ ಸಲ್ಲಿಸಲಾಗಿದೆ. ಅಲ್ಲಿದ ಬಂದ ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.
ಪ್ರಭಾಕರನ್ ಸಿಸಿಎಫ್, ಬಂಡೀಪುರ
ಬಗರ್‌ಹುಕುಂ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡುವ ಭರವಸೆ ನೀಡಿದ್ದಾರೆ. ಆದರೆ ಕೆಲವು ಭಾಗದಲ್ಲಿ ಮಾತ್ರ ಸಾಗುವಳಿ ಪತ್ರ ನೀಡಿದ್ದಾರೆ. ಸಾಗುವಳಿ ಪತ್ರ ನೀಡುವುದು ಮುಖ್ಯವಲ್ಲ. ಬದಲಾಗಿ ಖಾತೆ ಮಾಡಬೇಕು. ಆಗ ಅದಕ್ಕೆ ಒಂದು ಅರ್ಥ ಬರುತ್ತದೆ. ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಪತ್ರ ನೀಡಿದ್ದಾರೆ ಎಂದರು ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆ ನೀಡುತ್ತಾರೆ. ಕಂದಾಯ ಇಲಾಖೆ ಸಾಗುವಳಿ ಪತ್ರದ ಆಧಾರದ ಮೇಲೆ ರೈತರ ಹೆಸರಿಗೆ ಖಾತೆ ಮಾಡಬೇಕು.
ಎಸ್.ಡಿ.ಸಣ್ಣಸ್ವಾಮಿ ಅಧ್ಯಕ್ಷ, ಅಂಬೇಡ್ಕರ್ ಭವನ ಟ್ರಸ್ಟ್
ಸಾಲ ಸೋಲ ಮಾಡಿ ಮನೆ ಕಟ್ಟಿಲಾಗಿದೆ. ಜತೆಗೆ 50-60 ವರ್ಷಗಳಿಂದ 1-2 ಎಕರೆಯನ್ನು ಉಳುಮೆ ಮಾಡುತ್ತಿದ್ದು, ಜಮೀನಿನ ಹಕ್ಕುಪತ್ರಕ್ಕಾಗಿ ನಮೂನೆ 53ರಲ್ಲಿ 1999ರಲ್ಲೇ ಅರ್ಜಿ ಸಲ್ಲಿಸಿದ್ದರೂ ನಮಗೆ ಸಿಕ್ಕಿಲ್ಲ. ಉಳ್ಳವರಿಗೆ ಮಾತ್ರ ಸಾಗುವಾಳಿ ಪತ್ರ ವಿತರಣೆ ಮಾಡುತ್ತಾರೆ. ನಮ್ಮಂತವರಿಗೆ ಇಂದು, ನಾಳೆ ಎಂದು ಹೇಳಿ ಕಳುಹಿಸುತ್ತಾರೆ. ಅಧಿಕೃತ ಹಕ್ಕುಪತ್ರವಿಲ್ಲದೆ ಸ್ವಾಧೀನತೆಯಲ್ಲಿರುವ ಜಮೀನನ್ನು ಅಭಿವೃದ್ಧಿ ಮಾಡಲಾಗುತ್ತಿಲ್ಲ. ಜತೆಗೆ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತಿಲ್ಲ. ಸರ್ಕಾರದ ಸವಲತ್ತಗಳನ್ನೂ ಪಡೆಯಲಾಗುತ್ತಿಲ್ಲ.
ಭಾಗ್ಯ ಕೆಂಪಸಿದ್ದ ಮಾಜಿ ಗ್ರಾಪಂ ಸದಸ್ಯ ಹಾದನೂರು