ತಿ.ನರಸೀಪುರ ಪಟ್ಟಣದ ಲಿಂಕ್ ರಸ್ತೆಯಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿ ಜಾನುವಾರುಗಳನ್ನು ಕಿಚ್ಚು ಹಾಯಿಸಲಾಯಿತು.
ತಿ.ನರಸೀಪುರ: ಸಂಕ್ರಾಂತಿ ಹಬ್ಬದ ಅಂಗವಾಹಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿಯ ಲಿಂಕ್ ರಸ್ತೆಯಲ್ಲಿ ರೈತರು ಜಾನುವಾರುಗಳಿಗೆ ಕಿಚ್ಚು ಹಾಯಿಸಿದರು.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಕ್ರಾಂತಿಯ ಸಂಭ್ರಮ ಕಂಡು ಬಂತು. ಬೆಳಗ್ಗೆಯಿಂದಲೇ ಜಾನುವಾರುಗಳನ್ನು ಅಲಂಕರಿಸಿದ ರೈತರು ಮಧ್ಯಾಹ್ನದ ಬಳಿಕ ಖಾಸಗಿ ಬಸ್ ನಿಲ್ದಾಣ ವೃತ್ತದ ಬಳಿ ಜಮಾವಣೆಗೊಂಡು ಹುಲ್ಲನ್ನು ತಂದು ರಸ್ತೆಗೆ ಅಡ್ಡಲಾಗಿ ಹಾಕಿ ಪೂಜೆ ಸಲ್ಲಿಸಿ, ಬೆಂಕಿ ಹಚ್ಚಿದರು. ಅಷ್ಟೋತ್ತಿಗಾಗಲೇ ಕಿಚ್ಚು ಹಾಯಲು ಸಿದ್ಧವಾಗಿದ್ದ ಅಲಂಕೃತ ಎತ್ತುಗಳು, ಹಸುಗಳು, ಕರುಗಳು ಹಾಗೂ ಮೇಕೆ - ಕುರಿಗಳು ಬೆಂಕಿಯ ಕೆನ್ನಾಲಗೆಯಲ್ಲಿ ಹಾದು ಹೋದವು.
ರಾಸುಗಳ ಕಿಚ್ಚಾಯಿಸುವುದನ್ನು ವೀಕ್ಷಿಸಲು ಖಾಸಗಿ ಬಸ್ ನಿಲ್ದಾಣ ಹಾಗೂ ಲಿಂಕ್ ರಸ್ತೆಯ ಇಕ್ಕೆಲಗಳಲ್ಲಿ ಜನ ಸಂದಣಿ ನೆರೆದಿತ್ತು.ದೇವಾಲಯಗಳಲ್ಲಿ ವಿಶೇಷ ಪೂಜೆ: ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆಗಳು ನಡೆದವು. ಬೆಳಗ್ಗಿನಿಂದಲೇ ದೇವರಿಗೆ ಅಲಂಕಾರ, ಅಭಿಷೇಕ ಮತ್ತಿತರ ಸಾಂಪ್ರದಾಯಿಕ ಪೂಜೆಗಳನ್ನುಹಮ್ಮಿಕೊಳ್ಳಲಾಗಿತ್ತು. ಇತ್ತ ಮನೆಗಳಲ್ಲಿ ಗೋವಿಗೆ ಪೂಜೆ ಸಲ್ಲಿಸಿ ಸಿಹಿ ಪೊಂಗಲ್ ನೀಡಲಾಯಿತು.