ಅರಣ್ಯದಂಚಿನಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ರೆಸಾರ್ಟ್, ಹೋಟೆಲ್ ಹಾಗೂ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲು ಆಗ್ರಹಿಸಿ ಕಬಿನಿ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು. 
ಮೈಸೂರು

ಕಬಿನಿ, ನಾಗರಹೊಳೆ, ಬಂಡೀಪುರದಲ್ಲಿ ಅಕ್ರಮ ರೆಸಾರ್ಟ್ ತೆರವಿಗೆ ರೈತರಿಂದ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು: ಕಬಿನಿ, ನಾಗರಹೊಳೆ ಮತ್ತು ಬಂಡೀಪುರ ಅರಣ್ಯದಂಚಿನಲ್ಲಿ ನಿಯಮ ಬಾಹಿರವಾಗಿ ನಿರ್ಮಾಣಗೊಂಡಿರುವ ರೆಸಾರ್ಟ್, ಬಾರ್, ಹೋಟೆಲ್‌ಗಳ ತೆರವಿಗೆ ಆಗ್ರಹಿಸಿ ಕಬಿನಿ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
ಕಾನೂನು ಉಲ್ಲಂಘಿಸಿ ಅರಣ್ಯದಂಚಿನಲ್ಲಿ ನಿರ್ಮಾಣವಾಗಿರುವ ರೆಸಾರ್ಟ್, ಹೋಟೆಲ್, ವಾಣಿಜ್ಯ ಕಟ್ಟಡಗಳಿಂದ ಶಬ್ದ ಹಾಗೂ ವಾಯು ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಕಾಡು ಪ್ರಾಣಿಗಳು ಆತಂಕಗೊಂಡು ನಾಡಿನತ್ತ ಮುಖ ಮಾಡುತ್ತಿದ್ದು, ಕಾಡಂಚಿನ ಪ್ರದೇಶದ ಕೃಷಿ ಕೂಲಿ ಕಾರ್ಮಿಕರು, ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದುವರೆಗೆ ಒಟ್ಟು 4 ರೈತರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಸಾಕಷ್ಟು ಜಾನುವಾರುಗಳು ಹುಲಿಗೆ ಬಲಿಯಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಕಟ್ಟಡಗಳಿಂದ ಬರುವ ಶಬ್ದ ಹಾಗೂ ರಾತ್ರಿ ಸಂದರ್ಭ ವಾಹನಗಳು ಲೈಟ್ ಬಳಕೆ ಮಾಡುವ ಹಿನ್ನೆಲೆಯಲ್ಲಿ ಪ್ರಾಣಿಗಳು ಆತಂಕಕ್ಕೆ ಒಳಗಾಗುತ್ತಿವೆ. ಇದರಿಂದ ಮಾನವ-ವನ್ಯಜೀವಿಗಳ ನಡುವೆ ಸಂಘರ್ಷ ಸಂಭವಿಸುತ್ತಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ರೈತರ ಸಮಸ್ಯೆ ಆಲಿಸಬೇಕು. ಜತೆಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ ರೆಸಾರ್ಟ್‌ಗಳ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅಕ್ರಮವಾಗಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪದಾಧಿಕಾರಿಗಳಾದ ಕೆರೆಹುಂಡಿ ರಾಜಣ್ಣ, ಡಾ.ಅನುಮಯ್ಯ, ವಳಗೆರೆ ಗಣೇಶ್, ದೇವನೂರು ನಾಗೇಂದ್ರ, ಮಹೇಂದ್ರ ಮುದ್ದಳ್ಳಿ, ಮಧುಸೂದನ್, ಪಿ.ಚಿದಂಬರ, ಶಿವಣ್ಣ, ಮಹೇಶ್, ದೇವಿರಮ್ಮನಹಳ್ಳಿ ಸಿದ್ದಬಸಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.