ಹುಣಸೂರು ನಗರದ ಸೆಸ್ಕ್ ಕಚೇರಿ ಆವರಣದಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬೆಂಕಿಪುರ ಚಿಕ್ಕಣ್ಣ, ಅಗ್ರಹಾರ ರಾಮೇಗೌಡ, ಚಂದ್ರೇಗೌಡ ಇದ್ದರು.
ಹುಣಸೂರು : ಕೃಷಿ ಪಂಪ್‌ಸೆಟ್‌ಗಳಿಗೆ ಹಗಲುಹೊತ್ತು ನಿರಂತರವಾಗಿ ಕನಿಷ್ಠ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ನಗರದ ಸೆಸ್ಕ್ ಉಪವಿಭಾಗ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ಜನಮಾಯಿಸಿದ ಪ್ರತಿಭಟನಾಕಾರರು, ರೈತರು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.
ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ವಿದ್ಯುತ್ ಕೊರತೆಯಿಂದಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ಒಣಗುತ್ತಿವೆ. ಒಂದಡೆ ನೀರಿನ ಕೊರತೆ ಮತ್ತೊಂದೆಡೆ ವಿದ್ಯುತ್ ಪೂರೈಕೆಯಲ್ಲಿನ ಕೊರತೆ ರೈತರನ್ನು ಕಾಡುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೆ ಟಿಸಿಗಳು ಸುಟ್ಟು ಹೋಗುತ್ತಿದ್ದು, ನಿಗದಿತ ಕಾಲಮಿತಿಯೊಳಗೆ ಟಿಸಿ ಬದಲಾವಣೆ ಆಗುತ್ತಿಲ್ಲ. ವಿದ್ಯುತ್ ಖಾಸಗೀಕರಣಕ್ಕೆ ಸರ್ಕಾರ ಹೊರಟಿರುವುದು ಖಂಡನೀಯ. ಇದು ಬೇಸಿಗೆ ಕಾಲವಾಗಿದ್ದು, ನಿರಂತರ ವಿದ್ಯುತ್ ನೀಡುವ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು ಎಂದು ಆಗ್ರಹಿಸಿದರು.
ಮುಖಂಡ ಕಿರಿಜಾಜಿ ಶಿವಶಂಕರ್, ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಪೂರೈಸಿದಲ್ಲಿ ರೈತರು ವನ್ಯಜೀವಿಗಳ ದಾಳಿಗೆ ಒಳಗಾಗಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಹಗಲು ವೇಳೆ ವಿದ್ಯುತ್ ನೀಡುವಂತೆ ಸರ್ಕಾರಕ್ಕೆ ಸಾಕಷ್ಟು ಬಾರಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ರೈತರ ಜೀವಕ್ಕೆ ಬೆಲೆಯಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಉಂಡುವಾಡಿ ಸಿ.ಚಂದ್ರೇಗೌಡ ಮಾತನಾಡಿ, ಟಿಸಿ ಸುಟ್ಟುಹೋಗಿ ತಿಂಗಳುಗಳೇ ಸಂದರೂ ಬದಲಾಯಿಸುತ್ತಿಲ್ಲ. ಕೃಷಿಪಂಪ್‌ಸೆಟ್‌ಗೆ ಸೋಲಾರ್ ಅಳವಡಿಕೆ ಕಾರ್ಯಕ್ಕೆ ಮಂಡಳಿ ಮುಂದಾಗಿದೆ. ಆದರೆ ಹಣ ಕಟ್ಟಲು ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರಿಗೆ ಸಾಧ್ಯವಿಲ್ಲ. ಹಾಗಾಗಿ ಮುಂಗಡ ಹಣ ನೀಡುವ ಕಾಲಾವಧಿ ಮುಂದೂಡಬೇಕು. ರೈತರಿಗೆ ಸೋಲಾರ್ ವ್ಯವಸ್ಥೆ ಅಳವಡಿಸಿಕೊಳ್ಳಲು ಸರ್ಕಾರ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಮಾತನಾಡಿದರು. ಗೌರವಾಧ್ಯಕ್ಷ ವಿಷಕಂಠಪ್ಪ, ಕೆ.ಬಿ.ಜಯಣ್ಣ, ವಿ.ಟಿ.ಮಣಿ, ಮಹದೇವು, ರವಿನಾರಾಯಣ್ ಇತರರು ಹಾಜರಿದ್ದರು. ಎಇಇ ಜಗದೀಶ್‌ರಿಗೆ ಮನವಿ ಸಲ್ಲಿಸಲಾಯಿತು.