ಹುಣಸೂರು ತಾಲೂಕು ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಹೊಸೂರು ಕುಮಾರ್, ಅಗ್ರಹಾರ ರಾಮೇಗೌಡ, ಶಿವಶಂಕರ್, ಚಂದ್ರೇಗೌಡ ಇತರರಿದ್ದರು. 
ಮೈಸೂರು

ಮೂರನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ

ಹುಣಸೂರು: ತಂಬಾಕು ದರ ಕುಸಿತ ಹಿನ್ನೆಲೆಯಲ್ಲಿ ಖರೀದಿ ಕಂಪನಿಗಳು ಮತ್ತು ಮಂಡಳಿ ಅಧಿಕಾರಿಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡು ದಿನ ಪೂರೈಸಿದೆ.
ಗುರುವಾರ ರೈತಸಂಘ ಮತ್ತು ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯ ಮುಖ್ಯದ್ವಾರವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಂಬಾಕು ಬೆಲೆಯಲ್ಲಿ 50-60 ರೂ. ಕುಸಿತ ಕಂಡರೂ ಮಂಡಳಿಯಾಗಲಿ, ಖರೀದಿ ಕಂಪನಿಗಳಾಗಲಿ ರೈತರ ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ತೆರಿಗೆ ವಿಧಿಸಿದೆ ಎಂಬ ಕಾರಣವೊಡ್ಡಿ 15 ದಿನಗಳ ಕಾಲ ಇದ್ದಕ್ಕಿದ್ದಂತೆ ಖರೀದಿ ಕಂಪನಿಳು ಖರೀದಿಯನ್ನು ರದ್ದುಗೊಳಿಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ತಮ್ಮ ಬೇಡಿಕೆ ಈಡೇರಿಸಿಕೊಂಡಿವೆ. ಆದರೆ ರೈತರ ನ್ಯಾಯಯುತ ಬೇಡಿಕೆಗಳಿಗೆ ಸರ್ಕರವಾಗಲಿ, ಮಂಡಳಿಯಾಗಲಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಪ್ರಸ್ತುತ ಸಾಲಿನ ಆರಂಭದಲ್ಲಿ ನೀಡಿದಂತೆ ಗುಣಮಟ್ಟದ ತಂಬಾಕಿಗೆ ಕೆಜಿಗೆ 320 ರೂ. ನೀಡದ ಹೊರತು ರೈತರು ತಂಬಾಕನ್ನು ಮಾರಾಟ ಮಾಡುವುದಿಲ್ಲ. ಮಂಡಳಿಗೆ ಈ ದರವನ್ನು ಕೊಡಿಸಲು ಆಗಲಿಲ್ಲವೆಂದರೆ ಮುಂಬರುವ ಸಾಲಿಗೆ ತಂಬಾಕು ಕೃಷಿಗೆ ರಜೆ ಘೋಷಿಸಲಿದ್ದೇವೆ. ಸರ್ಕಾರ ತಂಬಾಕು ಬೆಳೆವ ರೈತರಿಗೆ 10 ಲಕ್ಷ ರೂ. ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ ಮಾತನಾಡಿ, ಆಂಧ್ರಪ್ರದೇಶದಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಉತ್ತಮ ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ ಕರ್ನಾಟಕದ ರೈತರಿಗೆ ಮಾತ್ರ ಅನ್ಯಾಯವೆಸಗಲಾಗುತ್ತಿದೆ. ವಿಶ್ವದಲ್ಲೇ ಅತ್ಯುತ್ತಮ ದರ್ಜೆಯ ವರ್ಜೀನಿಯಾ ತಂಬಾಕನ್ನು ಬೆಳೆವ ನಮಗೆ ಅವೈಜ್ಞಾನಿಕ ದರ ನೀಡುತ್ತಿರುವುದು ಖಂಡನೀಯ ಎಂದರು.
ಎಚ್.ವಿಶ್ವನಾಥ್ ಭೇಟಿ: ಪ್ರತಿಭಟನಾ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ವಿಶ್ವದ ಅತ್ಯುತ್ತಮ ಗುಣಮಟ್ಟದ ತಂಬಾಕು ಬೆಳೆಯುವ ಕರ್ನಾಟಕದ ರೈತರ ನೆರವಿಗೆ ಸರ್ಕಾರಗಳು ಮುಂದಾಗಬೇಕು. ರಾಜ್ಯ ಸರ್ಕಾರವೂ ತಂಬಾಕು ಕೃಷಿಯಿಂದ ವಾರ್ಷಿಕ 500 ಕೋಟಿ ರೂ. ಆದಾಯ ಗಳಿಸುತ್ತಿದೆ. ಹಾಗಾಗಿ ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯವೆಂದು ರಾಜ್ಯ ಸರ್ಕಾರ ಕೈತೊಳೆದುಕೊಳ್ಳುವಂತಿಲ್ಲ. ಈವರೆಗೆ ರಾಜ್ಯ ಸರ್ಕಾರದ ಒಬ್ಬ ಮಂತ್ರಿಯೂ ಸ್ಥಳಕ್ಕೆ ಬಂದು ರೈತರ ಬೇಡಿಕೆಯನ್ನು ಕೇಳಿಲ್ಲ. ವಿಷಯದ ಗಂಭೀರತೆ ಕುರಿತು ತಾವು ಈಗಾಗಲೇ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ವಿದೇಶದಲ್ಲಿರುವ ಅವರು ಈ ಸಂಜೆ ತಂಬಾಕು ಮಂಡಳಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದರು.
ಮುಖಂಡ ಅಶೋಕ್‌ಕುಮಾರ್, ಮೋದೂರು ಶಿವಣ್ಣ ಮಾತನಾಡಿದರು. ರೈತಸಂಘಧ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಕಿರಿಜಾಜಿ ಶಿವಶಂಕರ್, ಕಾಳೇಗೌಡನಕೊಪ್ಪಲು ಚನ್ನೇಗೌಡ ಮುಂತಾದವರು ಭಾಗವಹಿಸಿದ್ದರು. ಹುಣಸೂರು, ಕಗ್ಗುಂಡಿ ಯ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದ್ದು, ಎಚ್.ಡಿ.ಕೋಟೆ ಮಾರುಕಟ್ಟೆ ನಾಳೆಯಿಂದ ಬಂದ್ ಆಗಲಿವೆ ಎಂದು ರೈತಮುಖಂಡರು ತಿಳಿಸಿದರು.