ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಖಂಡಿಸಿ, ರೈತರು ನಡೆಸುತ್ತಿರುವ ಪ್ರತಿಭಟನೆ ವೇಳೆ ತಾಲೂಕು ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
- ಭೂಸ್ವಾಧೀನ ಪ್ರಕ್ರಿಯೆಗೆ ಖಂಡನೆ
ನಂಜನಗೂಡು: ತಾಲೂಕಿನ ಮುದ್ದಹಳ್ಳಿ, ಸಿಂಧುವಳ್ಳಿಪುರ, ಎಲಚಗೆರೆ ಗ್ರಾಮಗಳ ಸುತ್ತಮುತ್ತ ಭೂ ಸ್ವಾಧೀನ ಪ್ರಕ್ರಿಯೆಯನ್ನು ಖಂಡಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಶನಿವಾರ 13ನೇ ದಿನ ಪೂರೈಸಿತು. ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶಿರಮಳ್ಳಿ ಮಂಜುನಾಥ್ ಮಾತನಾಡಿ, ಮುದ್ದಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 448 ಎಕರೆ ಪ್ರದೇಶವನ್ನು ಕೆಐಎಡಿಬಿ ಭೂಸ್ವಾಧೀನ ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿದೆ. ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳು ಫಲವತ್ತತೆಯಿಂದ ಕೂಡಿದೆ. ಬಾಳೆ, ತೆಂಗು, ಅರಿಶಿಣ ಹಾಗೂ ತರಕಾರಿ ಬೆಳೆಗಳನ್ನು ರೈತರು ಬೆಳೆದು ಜೀವನ ಕಟ್ಟಿಕೊಂಡಿದ್ದಾರೆ. ಈ ಜಮೀನುಗಳು ಬಿಟ್ಟರೆ ಬೇರೆ ಭಾಗದಲ್ಲಿ ಜಮೀನುಗಳು ಇಲ್ಲದೆ ಅತಂತ್ರವಾಗುತ್ತಾರೆ. ಈ ಬಗ್ಗೆ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತ ಹೋರಾಟಗಾರ ಹೊನ್ನೂರು ಪ್ರಕಾಶ್ ಹಾಗೂ ಮಂಜು ಕಿರಣ್ ನೇತೃತ್ವದಲ್ಲಿ ಸಭೆ ನಡೆಸಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಉಗ್ರ ಪ್ರತಿಭಟನೆಗೆ ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು.
ಬಳಿಕ ರೈತರ ಮುದ್ದಹಳ್ಳಿ ಗುರುಸ್ವಾಮಿ ಮಾತನಾಡಿ, ಇದೇ ತಿಂಗಳ ಆರರಂದು ಈ ಸಂಬಂಧ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಜಮೀನುಗಳನ್ನು ನಂಬಿ ಈ ಭಾಗದ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಕೆಐಎಡಿಬಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಭರವಸೆಯನ್ನು ಸಹ ಕೊಟ್ಟಿದ್ದಾರೆ. ನಮ್ಮ ಪ್ರಾಣ ಹೋದರೂ ಸರಿ ಜಮೀನು ಮಾರುವುದಿಲ್ಲ ಎಂದರು. ಇದು ಕೇವಲ 13 ದಿನಗಳಲ್ಲ. ಎಷ್ಟೇ ದಿನಗಳಾದರೂ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.
ರೈತರಾದ ಮಲ್ಲಿಕಾರ್ಜುನ, ವೇಣುಗೋಪಾಲ್, ವಿಜಯಲಕ್ಷ್ಮೀ, ನಾಗಯ್ಯ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.